ಚತ್ತೋಗ್ರಾಮ್: ಬಾಂಗ್ಲಾದೇಶ(IND VS BAN ) ವಿರುದ್ಧದ ಏಕ ದಿನ ಸರಣಿಯಲ್ಲಿ ಸೋಲನುಭವಿಸಿದ ಭಾರತ ತಂಡ ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಿದ್ಧವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಬೇಕಾದರೆ ಈ ಸರಣಿಯಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಸರಣಿಯ ಮೊದಲ ಪಂದ್ಯ ಬುಧವಾರ(ಡಿಸೆಂಬರ್ 14) ಆರಂಭವಾಗಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಚತ್ತೋಗ್ರಾಮ್‌ನ ಝಹೂರ್ ಅಹ್ಮದ್ ಚೌಧರಿ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಪಂದ್ಯದ ಆರಂಭದಲ್ಲಿ ವೇಗದ ಬೌಲರ್‌ಗಳು ಸ್ವಲ್ಪ ಹಿಡಿತ ಸಾಧಿಸಿದರೂ. ಬಳಿಕ ಪಂದ್ಯದುದ್ದಕ್ಕೂ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಬಹುದು. ಆದ್ದರಿಂದ ಉಭಯ ತಂಡಗಳು ಹೆಚ್ಚಾಗಿ ಸ್ಪಿನ್ ಅಸ್ತ್ರವನ್ನು ಬಳಸಬಹುದು. ಕಳೆದ ಏಕ ದಿನ ಪಂದ್ಯದಲ್ಲಿಯೂ ಸ್ಪಿನ್ನರ್ಗಳೇ ಇಲ್ಲಿ ಮೇಲುಗೈ ಸಾಧಿಸಿದ್ದರು.
ಮಳೆ ಭೀತಿ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಬಾಂಗ್ಲಾದೇಶದಲ್ಲಿಯೂ ಕೆಲವೆಡೆ ಮಳೆಯಾಗಿದೆ. ಆದ್ದರಿಂದ ಭಾರತ ಮತ್ತು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೂ ಮಳೆ ಭೀತಿ ಕಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಮಂಗಳವಾರ ಚತ್ತೋಗ್ರಾಮ್ನಲ್ಲಿ ಮಳೆ ಕಾಟ ಇರಲಿಲ್ಲ.
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ
ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ಗೆಲ್ಲಬೇಕಾಗಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೂ ಮುಂದಿನ ಹಾದಿ ಕಠಿಣವಾಗಲಿದೆ. ಸದ್ಯ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ | IND VS BAN| ಭಾರತ ವಿರುದ್ಧದ ಟೆಸ್ಟ್ಗೂ ಮುನ್ನ ಬಾಂಗ್ಲಾಕ್ಕೆ ಆಘಾತ; ಆಸ್ಪತ್ರೆ ಸೇರಿದ ಶಕೀಬ್ ಅಲ್ ಹಸನ್