Site icon Vistara News

IND VS BAN | ದ್ವಿತೀಯ ಟೆಸ್ಟ್​: ಬಾಂಗ್ಲಾವನ್ನು ಕ್ಲೀನ್​ ಸ್ವೀಪ್​ ಮಾಡೀತೇ ಟೀಮ್​ ಇಂಡಿಯಾ?

IND VS BAN

ಢಾಕಾ: ಈಗಾಗಲೇ ಮೊದಲ ಟೆಸ್ಟ್​ ಪಂದ್ಯವನ್ನು ಗೆದ್ದಿರುವ ಟೀಮ್​ ಇಂಡಿಯಾ ದ್ವಿತೀಯ ಮತ್ತು ಸರಣಿಯ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಮುಖಾಮುಖಿ ಗುರುವಾರ ಶೇರ್​ ಬಾಂಗ್ಲಾ ರಾಪ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಮೊದಲ ಟೆಸ್ಟ್​ ಪಂದ್ಯ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದ ಭಾರತ, ಈ ಪಂದ್ಯದಲ್ಲಿಯೂ ಗೆದ್ದು ಫೈನಲ್‌ಗೆ ತಲುಪುವ ಆಸೆ ಇನ್ನಷ್ಟು ಗಟ್ಟಿಗೊಳಿಸುವ ಯೋಜನೆಯಲ್ಲಿದೆ. ಅತ್ತ ಬಾಂಗ್ಲಾ ಹೇಗಾದರೂ ಮಾಡಿ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲ ಮಾಡುವ ಜತೆಗೆ ತವರಿನಲ್ಲಿ ಕ್ಲೀನ್​ ಸ್ವೀಪ್​ ಮುಖಭಂಗದಿಂದ ಪಾರಾಗಲು ಹೋರಾಡಲಿದೆ.

ಭಾರತಕ್ಕೆ ಗಾಯದ ಚಿಂತೆ

ಈಗಾಗಲೇ ಸರಣಿಯಲ್ಲಿ ಹಲವು ಆಟಗಾರರು ಗಾಯಗೊಂಡು ಅರ್ಧದಲ್ಲೇ ಸರಣಿಯಿಂದ ಹೊರ ಬಿದ್ದಿದ್ದಾರೆ. ಹೀಗಿರುವಾಗ ತಂಡದ ನಾಯಕ ಕೆ.ಎಲ್​. ರಾಹುಲ್​ ಕೂಡ ಬುಧವಾರ ಅಭ್ಯಾಸದ ವೇಳೆ ಗಾಯಗೊಂಡು ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಇದೀಗ ಅಂತಿಮ ಪಂದ್ಯದಲ್ಲಿ ಆಡಲಿದ್ದಾರಾ ಎಂದು ಇನ್ನಷ್ಟೇ ತಿಳಿಯಬೇಕಿದೆ. ಆದ್ದರಿಂದ ಭಾರತಕ್ಕೆ ಗಾಯದ ಚಿಂತೆ ಕಾಡಿದೆ. ಅತ್ತ ಬಾಂಗ್ಲಾ ದೇಶಕ್ಕೂ ಇದೇ ಪರಿಸ್ಥಿತಿ. ಶಕಿಬ್​ ಅಲ್ ಹಸನ್​ ಗಾಯಗೊಂಡು ದಿತ್ವೀಯ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತಾದರೂ ಅವರು ಮತ್ತೆ ತಂಡ ಸೇರಿಕೊಂಡು ಅಭ್ಯಾಸ ನಡೆಸಿದ್ದಾರೆ. ಆದರೂ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಂತೆ ಕಾಣುತ್ತಿಲ್ಲ. ಒಟ್ಟಾರೆ ಇತ್ತಂಡಗಳಿಗೂ ಗಾಯದ್ದೇ ಚಿಂತೆಯಾಗಿದೆ.

ಪೂಜಾರ, ಗಿಲ್​ ಉತ್ತಮ ಫಾರ್ಮ್​

ಕಳೆದ ಮೂರು ವರ್ಷಗಳ ಬಳಿಕ ಶತಕ ಸಿಡಿಸಿ ಬ್ಯಾಟಿಂಗ್​ ಫಾರ್ಮ್ ಕಂಡುಕೊಂಡ ಟೆಸ್ಟ್​ ಸ್ಪೆಷಲಿಸ್ಟ್‌ ಚೇತೇಶ್ವರ್​ ಪೂಜಾರ ಮೇಲೆ ಈ ಪಂದ್ಯದಲ್ಲಿಯೂ ನಿರೀಕ್ಷೆ ಇರಿಸಲಾಗಿದೆ. ಯುವ ಆಟಗಾರ ಶುಭಮನ್​ ಗಿಲ್​ ಕೂಡ ಉತ್ತಮ ಪ್ರದರ್ಶನ ತೋರುತ್ತಿರುವ ಕಾರಣದಿಂದ ಭಾರತದ ಬ್ಯಾಟಿಂಗ್​ ಬಲ ಗಟ್ಟಿಯಾಗಿದೆ. ಆದರೆ ನಾಯಕ ಕೆ.ಎಲ್​ ರಾಹುಲ್​ ಮತ್ತು ಮಾಜಿ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಫಾರ್ಮ್​ಗೆ ಮರಳಬೇಕಿದೆ.

ಬೌಲಿಂಗ್​ ವಿಭಾಗದಲ್ಲಿ ಅಕ್ಷರ್​ ಪಟೇಲ್​, ಕುಲ್​ದೀಪ್​ ಯಾದವ್ ಮತ್ತು ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್​ ಉತ್ತಮ ಲಯದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿಯೂ ಈ ತ್ರಿಮೂರ್ತಿಗಳು ತಮ್ಮ ಸ್ಪಿನ್​ ಮೋಡಿ ಮಾಡುವ ಮೂಲಕ ಬಾಂಗ್ಲಾ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಂಡಿದ್ದರು. ಇದೀಗ ಅಂತಿಮ ಪಂದ್ಯದಲ್ಲಿಯೂ ಸ್ಪಿನ್​ ಮ್ಯಾಜಿಕ್ ಮಾಡುವ ನಿರೀಕ್ಷೆ ಇದೆ.

​​ಬಾಂಗ್ಲಾವನ್ನು ಕಡೆಗಣಿಸುವಂತಿಲ್ಲ

ಮೊದಲ ಪಂದ್ಯ ಗೆದ್ದ ಕಾರಣಕ್ಕೆ ಬಾಂಗ್ಲಾದೇಶದ ಸವಾಲನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಬಾಂಗ್ಲಾ ಯಾವ ಕ್ಷಣದಲ್ಲಾದರೂ ತಿರುಗಿ ಬಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಆದ್ದರಿಂದ ಭಾರತ ಎಚ್ಚರಿಕೆ ಆಟವಾಡುವುದು ಅತ್ಯಗತ್ಯ. ಬಾಂಗ್ಲಾ ಪರ ಮೆಹೆದಿ ಹಸನ್‌ ಮಿರಾಜ್‌, ಝಾಕಿರ್‌ ಹಸನ್‌ ಮತ್ತು ನಾಯಕ ಶಕಿಬ್​ ಅಲ್​ ಹಸನ್​ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದ ಪಿಚ್​ ರಿಪೋರ್ಟ್; ಆಡುವ ಬಳಗದ ಮಾಹಿತಿ

Exit mobile version