ಚತ್ತೋಗ್ರಾಮ್: ಬಾಂಗ್ಲಾದೇಶ(IND VS BAN) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಸಿರಾಜ್ ಹಾಗೂ ಬಾಂಗ್ಲಾ ತಂಡದ ಆಟಗಾರ ಲಿಟನ್ ದಾಸ್ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ಆದರೆ ಈ ವಾಗ್ವಾದ ನಡೆದ ಮುಂದಿನ ಎಸೆತದಲ್ಲಿಯೇ ಸಿರಾಜ್, ಲಿಟನ್ ದಾಸ್ ಅವರನ್ನು ಕ್ಲೀನ್ ಬೌಲ್ಟ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿಯೂ ಸಾಥ್ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ತಂಡ ನೀಡಿದ 405 ರನ್ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದೇ ವೇಳೆ 14ನೇ ಓವರ್ ಎಸೆಯಲು ಬಂದ ಸಿರಾಜ್ ಹಾಗೂ ಲಿಟ್ಟನ್ ದಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಬೌಲಿಂಗ್ ನಡೆಸುತಿದ್ದ ಸಿರಾಜ್ ಕ್ರೀಸ್ನಲ್ಲಿದ್ದ ಲಿಟನ್ ದಾಸ್ಗೆ ಏನೋ ಹೇಳಿದರು. ಇದನ್ನು ನೋಡಿದ ಲಿಟನ್ ನನಗೆ ಸರಿಯಾಗಿ ಕೇಳಿಸಿಲ್ಲ. ಮತ್ತೊಮ್ಮೆ ಹೇಳು ಎಂಬಂತೆ ಸನ್ನೆ ಮಾಡಿದರು. ಈ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರುವುದನ್ನು ತಪ್ಪಿಸಲು ಮಧ್ಯಪ್ರವೇಶಿದ ಅಂಪೈರ್ಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೆ ಈ ಘಟನೆ ನಡೆದ ಮುಂದಿನ ಎಸೆತದಲ್ಲಿ ಸಿರಾಜ್, ಲಿಟ್ಟನ್ ಅವರ ವಿಕೆಟ್ ಕಿತ್ತು ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ.
ಲಿಟನ್ ಬೋಲ್ಡ್ ಆದ ಕೂಡಲೇ ಸಿರಾಜ್ ಅವರು ಲಿಟನ್ ಕಡೆಗೆ ಓಡಿ ಬೆರಳು ತೋರಿಸಿ ಸುಮ್ಮನಿರುವಂತೆ ಸನ್ನೆ ಮಾಡಿದರು. ಇದೇ ವೇಳೆ ಸ್ಲಿಪ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ, ಈ ಮೊದಲು ಲಿಟನ್ ಮಾಡಿದ ಸನ್ನೆಯಂತೆಯೇ ತಾವು ಕೂಡ ಸನ್ನೆ ಮಾಡಿ ಸಿರಾಜ್ಗೆ ಬೆಂಬಲ ಸೂಚಿಸಿದ್ದಾರೆ. ಈ ವಿಡಿಯೋ ಕಂಡ ಅಭಿಮಾನಿಗಳು ತಂಡದ ಆಟಗಾರನಿಗೆ ತೊಂದರೆಯಾದರೆ ಕಿಂಗ್ ಕೊಹ್ಲಿ ಯಾವತ್ತು ಸುಮ್ಮನಿರುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ | IND VS BAN | 25 ವರ್ಷಗಳ ಹಿಂದೆ ನಡೆದ ಘಟನೆಗೆ ಕ್ಷಮೆಯಾಚಿಸಿದ ಮಾಜಿ ವೇಗಿ ಅಲಾನ್ ಡೊನಾಲ್ಡ್; ಏನಿದು ಪ್ರಕರಣ!