ಮುಂಬಯಿ: ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ(IND VS BAN) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಹೊರತಾಗಿಯೂ ಎರಡನೇ ಟೆಸ್ಟ್‌ನಿಂದ ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಿದಕ್ಕೆ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರದಿಂದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ವೇಳೆ ಕುಲ್ದೀಪ್ ಯಾದವ್ ಬದಲು ಜೈದೇವ್ ಉನಾದ್ಕತ್ ಆಡುತ್ತಿದ್ದಾರೆಂದು ಹಂಗಾಮಿ ನಾಯಕ ಕೆ.ಎಲ್ ರಾಹುಲ್ ಬಹಿರಂಗಪಡಿಸಿದರು. ಅನಿರೀಕ್ಷಿತವಾಗಿ ಕುಲ್ದೀಪ್ ಅವರನ್ನು ಕೈ ಬಿಡಲಾಗಿದೆ. ಇದು ನಿಜಕ್ಕೂ ಕಠಿಣ ನಿರ್ಧಾರವಾಗಿದೆ. ಇವರ ಸ್ಥಾನದಲ್ಲಿ ಉನಾದ್ಕತ್ ಅವರನ್ನು ಆಡಿಸಲಾಗುತ್ತಿದೆ ಎಂದು ಹೇಳಿದರು.
ಇದರ ಬೆನ್ನಲ್ಲೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಖಂಡಿಸಿದ್ದಾರೆ. ಪಿಚ್ ಕಂಡೀಷನ್ಸ್ ಅನ್ವಯ ಒಬ್ಬ ಸ್ಪಿನ್ನರ್ ಕೈ ಬಿಡಬೇಕೆಂದು ನಿರ್ಧರಿಸಿದರೆ, ಬೇರೆ ಒಬ್ಬರನ್ನು ಕೈ ಬಿಡಬಹುದಿತ್ತು. ಆದರೆ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಕುಲ್ದೀಪ್ ಅವರನ್ನು ಕೈ ಬಿಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದ ಆಟಗಾರನನ್ನು ಕೈ ಬಿಟ್ಟಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇತರೆ ಇಬ್ಬರು ಸ್ಪಿನ್ನರ್‌ಗಳು ತಂಡದಲ್ಲಿ ಇದ್ದಾರೆ. ಇವರಲ್ಲಿ ಒಬ್ಬರನ್ನು ನೀವು ಬೆಂಚ್ ಕಾಯಿಸಬಹುದಿತ್ತು, ಆ ಮೂಲಕ ಕುಲ್ದೀಪ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಿತ್ತು. ಮೊದಲನೇ ಪಂದ್ಯದಲ್ಲಿ 8 ವಿಕೆಟ್ ಕಿತ್ತಿರುವ ಆಟಗಾರನನ್ನು ಈ ರೀತಿ ತಂಡದಿಂದ ಕೈ ಬಿಟ್ಟಿರುವುದು ನಿಜಕ್ಕೂ ಆಶ್ಚರ್ಯಕರ. ಒಟ್ಟಾರೆ ಟೀಮ್ ಮ್ಯಾನೆಜ್ಮೆಂಟ್ನ ಇಂತಹ ಕೆಟ್ಟ ನಿರ್ಧಾರದಿಂದ ಭಾರತ ಪ್ರಮುಖ ಸರಣಿಯಲ್ಲಿ ಸೋಲು ಕಾಣುತ್ತಿದೆ” ಎಂದು ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ | IND VS BAN | ಬರೋಬ್ಬರಿ 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಜೈದೇವ್ ಉನಾದ್ಕತ್