Site icon Vistara News

IND VS BAN | ಅಜರುದ್ದೀನ್​ ದಾಖಲೆ ಮುರಿದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ!

IND VS BAN Rohit

ಢಾಕಾ: ಬಾಂಗ್ಲಾದೇಶ ವಿರುದ್ಧದ (IND VS BAN) ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರೂ ಏಕ ದಿನ ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮೊಹಮ್ಮದ್​ ಅಜರುದ್ದೀನ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಭಾನುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಪರ ರೋಹಿತ್​ ಶರ್ಮ 27 ರನ್‌ಗಳಿಸಿ ಔಟಾದರು. ರೋಹಿತ್‌, ತಮ್ಮ ಈ ಇನಿಂಗ್ಸ್‌ ಮೂಲಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಭಾರತದ ಪರ ಅತ್ಯಧಿಕ ರನ್‌ಗಳಿಸಿದ ಆರನೇ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಭಾರತದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸದ್ಯ ರೋಹಿತ್​ 234 ಏಕದಿನ ಪಂದ್ಯಗಳಿಂದ ಒಟ್ಟಾರೆ 9403 ರನ್‌ಗಳನ್ನು ಬಾರಿಸಿಸುವ ಮೂಲಕ ಅಜರುದ್ದೀನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಅಜರುದ್ದೀನ್​ ತಮ್ಮ ವೃತ್ತಿ ಬದುಕಿನಲ್ಲಿ ಆಡಿದ 334 ಏಕದಿನ ಪಂದ್ಯಗಳಿಂದ ಒಟ್ಟು 9378 ರನ್‌ಗಳನ್ನು ಬಾರಿಸಿದ್ದಾರೆ.

ಏಕ ದಿನ ಕ್ರಿಕೆಟ್​ನಲ್ಲಿ ಭಾರತ ಪರ ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್‌ 463 ಪಂದ್ಯಗಳಿಂದ 18,426 ರನ್‌ಗಳನ್ನು ಬಾರಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ವಿರಾಟ್‌ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್‌ ದ್ರಾವಿಡ್‌ ಮತ್ತು ಎಂಎಸ್‌ ಧೋನಿ ಇದ್ದಾರೆ. ಆದರೆ ಈ ಎಲ್ಲ ಆಟಗಾರರು ನಿವೃತ್ತಿ ಹೊಂದಿರುವ ಕಾರಣ ಇನ್ನೂ ಕೆಲ ಆಟಗಾರರ ದಾಖಲೆಯನ್ನು ಮುರಿಯುವ ಅವಕಾಶ ರೋಹಿತ್​ಗೆ ಇದೆ.

ಇದನ್ನೂ ಓದಿ | Team India | ಭಾರತ ತಂಡದಲ್ಲಿ ಚಹಲ್ ಹಾಗೂ ಕುಲ್ದೀಪ್‌ ಸ್ಥಾನ ಪಡೆಯಲೇಬೇಕು ಎಂದ ಮಾಜಿ ಸ್ಪಿನ್ನರ್‌

Exit mobile version