ಚತ್ತೋಗ್ರಾಮ್: ಬಾಂಗ್ಲಾದೇಶ (IND VS BAN) ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತು ಏಕ ದಿನ ಸರಣಿಯನ್ನು ಕೈಚೆಲ್ಲಿಕೊಂಡಿರುವ ಭಾರತ ತಂಡ, ಶನಿವಾರ ಇಲ್ಲಿನ ಝಹೂರ್ ಅಹ್ಮದ್ ಕ್ರೀಡಾಂಗಣದಲ್ಲಿ ನಡೆಯುವ ಸರಣಿಯ ಅಂತಿಮ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಅವಮಾನದಿಂದ ಪಾರಾಗಲು ಎದುರು ನೋಡುತ್ತಿದೆ. ಮತ್ತೊಂದೆಡೆ ಈಗಾಗಲೇ ಸರಣಿ ಗೆದ್ದ ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿರುವ ಲಿಟನ್ ದಾಸ್ ಪಡೆ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಯೋಜನೆಯಲ್ಲಿದೆ.
ಭಾರತಕ್ಕೆ ಗಾಯದ ಬರೆ
ಭಾರತ ತಂಡಕ್ಕೆ ಈ ಸರಣಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆ ಕಾಡಿತ್ತು. ಆದರೂ ಟೀಮ್ ಇಂಡಿಯಾ ಲಭ್ಯರಿದ್ದ ಆಟಗಾರರನ್ನು ಕಟ್ಟಿಕೊಂಡು ಬಾಂಗ್ಲಾ ಪ್ರವಾಸ ಕೈಗೊಂಡಿತ್ತು. ಆದರೆ ಗಾಯದ ಸಮಸ್ಯೆ ಮಾತ್ರ ಭಾರತ ತಂಡಕ್ಕೆ ಬೆನ್ನು ಬಿಡದ ಬೇತಾಳನಂತೆ ಕಾಡುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಭಾರತ ತಂಡ ಬಾಂಗ್ಲಾ ವಿರುದ್ಧ ಆಡಿದ ಎರಡು ಎಕದಿನ ಪಂದ್ಯದಲ್ಲಿ ಒಟ್ಟು ಮೂರು ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವುದು.
ದ್ವಿತೀಯ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಹೆಬ್ಬೆರಳು ಗಾಯಕ್ಕೆ ತುತ್ತಾಗಿ ತವರಿಗೆ ಆಗಮಿಸಿದ್ದಾರೆ. ಇವರ ಜತೆ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಕುಲ್ದೀಪ್ ಸೇನ್ ಹಾಗೂ ದೀಪಕ್ ಚಾಹರ್ ಸ್ನಾಯು ಸೆಳೆತದ ಸಮಸ್ಯೆಯಿಂದ ತಂಡಕ್ಕೆ ಅಲಭ್ಯರಾಗಿದ್ದಾರೆ. ತಂಡದ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ತೋರೀತು ಎಂದು ಕಾದು ನೋಡಬೇಕಿದೆ.
ರಾಹುಲ್ ನಾಯಕ
ರೋಹಿತ್ ಶರ್ಮಾ ಅವರ ಅನುಪಸ್ಥಿಯಲ್ಲಿ ಉಪನಾಯಕನಾಗಿದ್ದ ಕೆ.ಎಲ್. ರಾಹುಲ್ ಅಂತಿಮ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ನಾಯಕನಾಗಿರುವ ರಾಹುಲ್ಗೆ ದೊಡ್ಡ ಸವಾಲೊಂದು ಎದುರಾಗಿದೆ. ಪ್ರಮುಖ ಆಟಗಾರರ ಗೈರಿನಲ್ಲಿ ರಾಹುಲ್ ಅಂತಿಮ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ ವೈಟ್ ವಾಶ್ ಸೋಲಿನ ಅವಮಾನದಿಂದ ತಂಡವನ್ನು ಪಾರು ಮಾಡುವ ದೊಡ್ಡ ಸವಾಲು ಅವರ ಹೆಗಲ ಮೇಲಿದೆ. ಜತೆಗೆ ಬ್ಯಾಟಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ತೋರಬೀಕಿದೆ.
ಕುಲದೀಪ್ ಯಾದವ್ ಮೇಲೆ ನಿರೀಕ್ಷೆ
ಅಂತಿಮ ಪಂದ್ಯಕ್ಕೆ ಆಯ್ಕೆಯಾದ ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಜತೆಗೆ ಶಿಖರ್ ಧವನ್, ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಕಳೆದ ಪಂದ್ಯದಲ್ಲಿ 82 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇನ್ನು ದೀಪಕ್ ಚಾಹರ್ ಹಾಗೂ ಕುಲ್ದೀಪ್ ಸೇನ್ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದುಲ್ ಠಾಕೂರ್ ಸಂಪೂರ್ಣ ಬೌಲಿಂಗ್ ವಿಭಾಗದ ಜವಾಬ್ದಾರಿ ನಿರ್ವಹಿಸಬೇಕಿದೆ.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೆ ತಂಡ ಪ್ರಕಟ; ಕುಲ್ದೀಪ್ ಯಾದವ್ಗೆ ಅವಕಾಶ