ಢಾಕಾ: ಕಳೆದ ಭಾನುವಾರ ನಡೆದ ಬಾಂಗ್ಲಾದೇಶ(IND VS BAN) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ವಿರೋಚಿತ ಸೋಲು ಕಂಡಿದ್ದ ಟೀಮ್ ಇಂಡಿಯಾ ಬುಧವಾರ ದ್ವಿತೀಯ ಪಂದ್ಯದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿರುವ ಬಾಂಗ್ಲಾ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಅತ್ತ ಭಾರತ ಸರಣಿ ಆಸೆ ಜೀವಂತವಿರಿಸುವ ನಿಟ್ಟಿನಲ್ಲಿ ಹೇಗಾದರೂ ಪಂದ್ಯವನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ.
ಫೀಲ್ಡಿಂಗ್ ಸುಧಾರಣೆ ಕಾಣಬೇಕಿದೆ ಭಾರತ
ಮೊದಲ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಕಳಪೆ ಫೀಲ್ಡಿಂಗ್. ಕೆ.ಎಲ್. ರಾಹುಲ್ ಸೇರಿದಂತೆ ಇತರ ಆಟಗಾರು ಪಂದ್ಯದ ಪ್ರಮುಖ ಘಟ್ಟದಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯವನ್ನು ಕಳೆದುಕೊಳ್ಳುವಂತಾಯಿತು. ಆದ್ದರಿಂದ ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಫೀಲ್ಡಿಂಗ್ ನಡೆಸಬೇಕಿದೆ. ಉಳಿದಂತೆ ಬ್ಯಾಟಿಂಗ್ ಕೂಡ ಸುಧಾರಣೆ ಕಾಣಬೇಕಿದೆ.
ನಾಯಕ ರೋಹಿತ್ ಶರ್ಮಾ ಟಿ20 ವಿಶ್ವ ಕಪ್ನಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯದ ಸರಣಿಯನ್ನು ಬಾಂಗ್ಲಾ ವಿರುದ್ಧವೂ ಮುಂದುವರಿಸಿದ್ದಾರೆ. ಮುಂದಿನ ವರ್ಷದ ಏಕ ದಿನ ವಿಶ್ವ ಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಈ ಪಂದ್ಯದಿಂದಲೇ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಬೇಕಿದೆ. ಜತೆಗೆ ಶಿಖರ್ ಧವನ್ ಕೂಡ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ನೀಡಬೇಕಿದೆ.
ಬಾಂಗ್ಲಾ ಸಮರ್ಥ ತಂಡ
ಹಿರಿಯ ಮತ್ತು ಯುವ ಆಟಗಾರರನ್ನು ಸಮತೋಲಿತವಾಗಿ ನೆಚ್ಚಿಕೊಂಡಿರುವ ಬಾಂಗ್ಲಾ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮರ್ಥವಾಗಿದೆ. ಅದರಲ್ಲೂ ಅನುಭವಿ ಆಲ್ರೌಂಡರ್ ಶಕಿಬ್ ಅಲ್ ಹಸನ್ ಮೊದಲ ಪಂದ್ಯದಲ್ಲಿ ಚೆಂಡನ್ನು ಬುಗುರಿಯಂತೆ ತಿರುಗಿಸಿ ಭಾರತದ ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಪಂದ್ಯದಲ್ಲಿಯೂ ಅವರ ಬೌಲಿಂಗ್ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿದೆ. ಉಳಿದಂತೆ ಕೆಲ ಕ್ರಮಾಂಕದಲ್ಲಿ ಆಡಲಿಳಿದು ಪಂದ್ಯದ ಗತಿಯನ್ನೇ ಬದಲಿಸುವ ಮೆಹೆದಿ ಹಸನ್ ಕೂಡ ಡೇಂಜರಸ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?