Site icon Vistara News

IND VS BAN | ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ​ಫೈನಲ್​ ಪ್ರವೇಶಿಸಲು ಇನ್ನೂ 6 ಪಂದ್ಯ ಗೆಲ್ಲಬೇಕಿದೆ ಟೀಮ್​ ಇಂಡಿಯಾ! ​

IND vs BAN

ಢಾಕಾ: ಬಾಂಗ್ಲಾದೇಶ(IND VS BAN ) ವಿರುದ್ಧದ ಏಕ ದಿನ ಸರಣಿಯಲ್ಲಿ ಸೋಲನುಭವಿಸಿದ ಭಾರತ ತಂಡ ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಿದ್ಧವಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಬೇಕಾದರೆ ಈ ಸರಣಿಯಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 14 ರಂದು ಆರಂಭವಾಗಲಿದೆ.

ಭಾರತ ತಂಡ ಈಗಾಗಲೇ ಅಭ್ಯಾಸವನ್ನು ಆರಂಭಿಸಿದೆ. ಏಕದಿನ ಸರಣಿಯ ವೇಳೆ ಹೆಬ್ಬೆರಳಿನ ಗಾಯದಿಂದ ತವರಿಗೆ ಮರಳಿರುವ ನಾಯಕ ರೋಹಿತ್ ಶರ್ಮಾ ಈ​ ಟೆಸ್ಟ್​ ಸರಣಿಗೆ ಲಭ್ಯರಿದ್ದಾರ ಎನ್ನುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಆದರೂ ಭಾರತ ತಂಡ ಗೆಲ್ಲುವ ವಿಶ್ವಾಸದಲ್ಲಿದೆ. ಏಕೆಂದರೆ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಇದುವರೆಗೂ ತವರಿನಲ್ಲಿ ಮತ್ತು ಹೊರಗಡೆ ಯಾವುದೇ ಟೆಸ್ಟ್ ಸರಣಿಯನ್ನೂ ಸೋತಿಲ್ಲ. ಆದರೂ ಬಾಂಗ್ಲಾ ಸವಾಲನ್ನು ಕಡೆಗಣಿಸುವಂತಿಲ್ಲ ಇದಕ್ಕೆ ಏಕ ದಿನದಲ್ಲಿ ಸರಣಿಯ ಫಲಿತಾಂಶವೇ ಉತ್ತಮ ನಿದರ್ಶನ.

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್​ ಇಂಡಿಯಾ

ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವೇಶಿಸಲು ಟೀಮ್​ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ಗೆಲ್ಲಬೇಕಾಗಿದೆ. ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೂ ಮುಂದಿನ ಹಾದಿ ಕಠಿಣವಾಗಲಿದೆ.

2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ ಇನ್ನೂ ಆರು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ಫೈನಲ್ ತಲುಪಬೇಕಾದರೆ ಉಳಿದ ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ. ಉಳಿದಂತೆ ದಕ್ಷಿಣ ಆಫ್ರಿಕಾ ಎರಡನೇ, ಶ್ರೀಲಂಕಾ ಮೂರನೇ ಸ್ಥಾನದಲ್ಲಿವೆ. 2019-21ರ ಚೊಚ್ಚಲ ಆವೃತ್ತಿಯ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದನ್ನೂ ಓದಿ | IND VS BAN | 44ನೇ ಏಕದಿನ ಶತಕ ಬಾರಿಸಿ ಮಿಂಚಿದ ವಿರಾಟ್​ ಕೊಹ್ಲಿ

Exit mobile version