Site icon Vistara News

IND VS BAN | ಶಕಿಬ್​ ಸ್ಪಿನ್​ ದಾಳಿಗೆ ನಲುಗಿದ ಟೀಮ್​ ಇಂಡಿಯಾ; ಬಾಂಗ್ಲಾ ಗೆಲುವಿಗೆ 187 ರನ್​ ಗುರಿ

ind vs ban

ಢಾಕಾ: ಆಲ್​ರೌಂಡರ್​ ಶಕಿಬ್​ ಅಲ್ ಹಸನ್​​ ಅವರ ಸ್ಪಿನ್​ ಮೋಡಿಯನ್ನು ಎದುರಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡ ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 186 ರನ್​ ಗಳಿಸಿದೆ. ಆತಿಥೇಯ ಬಾಂಗ್ಲಾ ಗೆಲುವಿಗೆ 187 ರನ್​ ಪೇರಿಸಬೇಕಿದೆ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 41.2 ಓವರ್​ಗಳಲ್ಲಿ 186ರನ್​ ಗಳಿಸಿ ಬಾಂಗ್ಲಾಕ್ಕೆ ಸವಾಲೊಡ್ಡಿದೆ. ಬಾಂಗ್ಲಾ ಪರ ಹಿರಿಯ ಆಲ್ ರೌಂಡರ್​ ಶಕಿಬ್​ ಅಲ್​ ಹಸನ್​ 36ಕ್ಕೆ 5 ವಿಕೆಟ್​ ಕಿತ್ತು ಮಿಂಚಿದರು.

ಭಾರತದ ಪರದಾಟ
ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ ಎಚ್ಚರಿಕೆಯ ಆರಂಭ ಪಡೆಯಿತು. ಆದರೆ ಪವರ್‌ ಪ್ಲೇ ಓವರ್‌ಗಳಲ್ಲೇ ಬಾಂಗ್ಲಾ ಪಡೆ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿ ಯಶಸ್ಸು ಕಂಡಿತು. ಆಫ್‌ ಸ್ಪಿನ್ನರ್‌ ಮೆಹಿದಿ ಹಸನ್‌ ಎದುರು ಶಿಖರ್‌ ಧವನ್‌(7) ಮೈಮರೆತರೆ, ಸ್ಟಾರ್‌ ಸ್ಪಿನ್ನರ್‌ ಶಕಿಬ್ ಅಲ್ ಹಸನ್‌ ಎದುರು ಒಂದೇ ಓವರ್‌ನಲ್ಲಿ ರೋಹಿತ್‌ ಶರ್ಮಾ(27) ಮತ್ತು ವಿರಾಟ್‌ ಕೊಹ್ಲಿ(9) ಇಬ್ಬರೂ ವಿಕೆಟ್ ಕೈಚೆಲ್ಲಿದರು. ತಂಡದ ಮೊತ್ತ 49ಕ್ಕೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಅದರಲ್ಲೂ ನಾಯಕ ಲಿಟ್ಟನ್​ ದಾಸ್ ಅವರು ಚಿರತೆಯಂತೆ ಜಿಗುದು ವಿರಾಟ್​ ಕೊಹ್ಲಿಯ ಕ್ಯಾಚ್​ ಪಡೆದದ್ದು ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿತು.

ತಂಡಕ್ಕೆ ಆಸರೆಯಾದ ರಾಹುಲ್​

ಟಿ20 ವಿಶ್ವ ಕಪ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕನ್ನಡಿಗ ಕೆ.ಎಲ್​. ರಾಹುಲ್​ ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದರು. ತಮ್ಮ ಅರ್ಧಶತಕದ ಮೂಲಕ ತಂಡಕ್ಕೆ ಆಸರೆಯಾದರು. ಸಹ ಆಟಗಾರರ ವಿಕೆಟ್​ ತರಗೆಲೆಯಂತೆ ಉದುರಿ ಹೋಗುತ್ತಿದ್ದರೂ ರಾಹುಲ್​ ಮಾತ್ರ ಏಕಾಂಗಿಯಾಗಿ ಬಾಂಗ್ಲಾ ಬೌಲರ್​ಗಳನ್ನು ಕಾಡಿದರು. ಈ ಪರಿಣಾಮ ಭಾರತ ಕನಿಷ್ಠ 150ರನ್​ಗಳ ಗಡಿ ದಾಟುವಲ್ಲಿ ಯಶಸ್ಸು ಕಂಡಿತು. ಉಳಿದಂತೆ ಯಾವ ಆಟಗಾರನೂ ಇವರಿಗೆ ಉತ್ತಮ ಸಾಥ್​ ನೀಡಲಿಲ್ಲ. ತಂಡ ಗಳಿಸಿದ ಒಟ್ಟು ಮೊತ್ತದಲ್ಲಿ ಅರ್ಧ ಪಾಲು ರಾಹುಲ್​ ಅವರ ವೈಯಕ್ತಿಕ ಮೊತ್ತವೇ ಅಧಿಕವಾಗಿತ್ತು. ಒಟ್ಟು 70 ಎಸೆತ ಎದುರಿಸಿದ ಅವರು 4 ಸಿಕ್ಸರ್​ ಮತ್ತು 5 ಬೌಂಡರಿ ನೆರವಿನಿಂದ 73 ರನ್​ ಗಳಿಸಿ ಎಬಾದತ್​ ಹೊಸೈನ್​ಗೆ ವಿಕೆಟ್​ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್​: ಭಾರತ 41.2 ಓವರ್​ಗಳಲ್ಲಿ 186ಕ್ಕೆ ಆಲೌಟ್​ (ಕೆ.ಎಲ್​. ರಾಹುಲ್​ 73 ರೋಹಿತ್​ ಶರ್ಮಾ 27, ಶ್ರೇಯಸ್​ ಅಯ್ಯರ್​ 24, ಶಕಿಬ್​ ಅಲ್​ ಹಸನ್​ 36ಕ್ಕೆ5)

ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ದಿಢೀರ್​ ಹೊರಬಿದ್ದ ರಿಷಭ್​ ಪಂತ್​ ಕಾರಣ ಏನು?

Exit mobile version