ನವದೆಹಲಿ: ಹೆಬ್ಬೆರಳಿನ ಗಾಯದಿಂದ ಬಾಂಗ್ಲಾದೇಶ(IND VS BAN) ವಿರುದ್ಧ 3ನೇ ಹಾಗೂ ಅಂತಿಮ ಏಕ ದಿನ ಪಂದ್ಯದಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿಗೂ ಅನುಮಾನ ಎನ್ನಲಾಗಿದೆ. ಇದೀಗ ರೋಹಿತ್ ಬದಲು ಭಾರತ ‘ಎ’ ತಂಡದ ನಾಯಕ ಅಭಿಮನ್ಯು ಈಶ್ವರನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ದ್ವಿತೀಯ ಏಕ ದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಅವರ ಬೆರಳಿಗೆ ಹೊಲಿಗೆ ಹಾಕಲಾಗಿದೆ. ಆದರೂ ಗಾಯದ ನಡುವೆ ಕೆಳ ಕ್ರಮಾಂಕದಲ್ಲಿ ಆಡಲಿಳಿದ ಅವರು ಬ್ಯಾಟಿಂಗ್ ಹೋರಾಟ ನಡೆಸಿದ್ದರು. ಆದರೆ ಇದೀಗ ಗಾಯದ ಪ್ರಮಾಣ ಹೆಚ್ಚಾಗಿರುವ ಕಾರಣದಿಂದ ಅವರನ್ನು ಅಂತಿಮ ಏಕ ದಿನ ಪಂದ್ಯದಿಂದ ಕೈಬಿಡಲಾಗಿದೆ. ಜತೆಗೆ ಟೆಸ್ಟ್ ಸರಣಿಗೂ ಅನುಮಾನ ಎನ್ನಲಾಗಿದೆ.
“ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 14ರಿಂದ ಆರಂಭವಾಗಲಿದೆ. ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಬಹುತೇಕ ಅಲಭ್ಯರಾಗುವ ಸಾಧ್ಯತೆಯಿದ್ದು ಅಭಿಮನ್ಯು ಈಶ್ವರನ್ ಅವರಿಗೆ ತಂಡ ಕೂಡಿಕೊಳ್ಳಲು ಬುಲಾವ್ ಬರುವ ಸಾಧ್ಯತೆಯಿದೆ” ಎಂದು ಪಿಟಿಐ ವರದಿ ಮಾಡಿದೆ.
ಆರಂಭಿಕ ಆಟಗಾರನಾಗಿರುವ ಅಭಿಮನ್ಯು ಈಶ್ವರನ್ ಅವರು ಭಾರತ ‘ಎ’ ಸರಣಿಯಲ್ಲಿ ಸತತ ಎರಡು ಶತಕ ಸಿಡಿಸಿದ್ದಾರೆ. ಎರಡನೇ ಭಾರತ ‘ಎ’ ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಅವರು ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ | IND VS BAN | ಭಾರತ ವಿರುದ್ಧದ ಟೆಸ್ಟ್ ಸರಣಿಗೆ 17 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ