ಆ್ಯಂಟಿಗುವಾ: ಬಾಂಗ್ಲಾದೇಶ(IND vs BAN) ವಿರುದ್ಧ ಇಂದು ನಡೆಯುವ ಸೂಪರ್-8 ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಟ್ಟು ಅವರ ಸ್ಥಾನದಲ್ಲಿ ಕುಲ್ದೀಪ್ಗೆ ಅವಕಾಶ ನೀಡಲಾಗಿತ್ತು. ಇದೀಗ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶಿವಂ ದುಬೆ(Shivam Dube) ಅವರನ್ನು ಬೆಂಚ್ ಕಾಯಿಸುವುದು ಬಹುತೇಖ ಖಚಿತ ಎನ್ನುತ್ತಿವೆ ಮೂಲಗಳು.
ಐಪಿಎಲ್ನ ಆರಂಭಿಕ ಕೆಲ ಪಂದ್ಯಗಳಲ್ಲಿ ಸತತವಾಗಿ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಗಮನಸೆಳೆದಿದ್ದ ದುಬೆ, ಟಿ20 ವಿಶ್ವಕಪ್ನಲ್ಲಿ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಇವರನ್ನು ಕೈ ಬಿಟ್ಟು ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಸಂಜು ಸ್ಯಾಮ್ಸನ್ ಅಥವಾ ಯಶಸ್ವಿ ಜೈಸ್ವಾಲ್(Yashasvi Jaiswal) ಅವರನ್ನು ಆಡಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಯಶಸ್ವಿ ಜೈಸ್ವಾಲ್ಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವುದು ಖಚಿತ ಎನ್ನಲಾಗಿತ್ತಿದೆ. ಏಕೆಂದರೆ ತಂಡ ಪವರ್ ಪ್ಲೇಯಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗುತ್ತಿದೆ. ನಾಯಕ ರೋಹಿತ್ ಮತ್ತು ಕೊಹ್ಲಿ(Virat Kohli) ಜೋಡಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಹೀಗಾಗಿ ಕೊಹ್ಲಿ ಬದಲು ರೋಹಿತ್ ಮತ್ತು ಜೈಸ್ವಾಲ್ ಆರಂಭಿಕರಾಗಿ ಆಡುವ ಸಾಧ್ಯತೆ ಇದೆ. ಜೈಸ್ವಾಲ್ ವಿಂಡೀಸ್ ನೆಲದಲ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಕೂಡ ಹೊಂದಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್ನಲ್ಲಿಯೇ ಶತಕ ಬಾರಿಸಿ ಮಿಂಚಿದ್ದರು. ಹಕವು ಮಾಜಿ ಆಟಗಾರರು ಕೂಡ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಜೈಸ್ವಾಲ್ ಅವಕಾಶ ಪಡೆಯಬಹುದು.
ಸಿರಾಜ್ ಬದಲು ಕುಲದೀಪ್ ಅವರನ್ನು ಆಡಿಸಿದ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ ಸಿರಾಜ್ ಈ ಪಂದ್ಯದಲ್ಲಿಯೂ ಬೆಂಚ್ ಕಾಯಬೇಕಾಗಬಹುದು. ರಿಷಭ್ ಪಂತ್ಗೆ ಬ್ಯಾಕ್ ಅಪ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ ಸಂಜುಗೆ ಅವಕಾಶ ಸಿಗುವುದು ಅನುಮಾನ. ಏಕೆಂದರೆ, ಸಂಜು ಆಡಿ ಒಂದೊಮ್ಮೆ ಗಾಯಗೊಂಡರೆ ತಂಡದಲ್ಲಿ ಬೇರೆ ಮೀಸಲು ಕೀಪರ್ ಇಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಂಜು ಆಡಿಸುವುದು ಕಷ್ಟ ಸಾಧ್ಯ.
ಇದನ್ನೂ ಓದಿ IND vs BAN: ಇಂದು ಭಾರತ-ಬಾಂಗ್ಲಾ ಸೂಪರ್-8 ಸೆಣಸಾಟ; ಪಂದ್ಯಕ್ಕೆ ಮಳೆ ಭೀತಿ ಇದೆಯೇ?
ಸಂಭಾವ್ಯ ತಂಡ
ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್.
ಮಳೆ ಭೀತಿ ಇಲ್ಲ
ಹವಾಮಾನ ವರದಿಗಳ ಪ್ರಕಾರ, ಶನಿವಾರ ಈ ಸ್ಥಳದ ತಾಪಮಾನವು ಹಗಲಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ 27 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಮಧ್ಯಾಹ್ನ ಸ್ವಲ್ಪ ಮೋಡ ಕವಿದ ವಾತಾವರಣ ಕಂಡು ಬಂದರೂ ಕೂಡ ಮಳೆಯಾಗುವ ಸಾಧ್ಯತೆ ಶೇ.1ರಷ್ಟಿದೆ. ತೇವಾಂಶವು 68% ಆಗಿರುತ್ತದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಳ್ಳಲಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 34 ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿವೆ.