ಅಡಿಲೇಡ್: ಮಳೆ ಪೀಡಿತ ಪಂದ್ಯದಲ್ಲಿ ಭಾರತ(IND VS BANGLA) ತಂಡದ ವಿರುದ್ಧ ಬಾಂಗ್ಲಾದೇಶ 5 ರನ್ ಅಂತರದ ಸೋಲನುಭವಿಸಿದೆ. ಭಾರತ ಈ ಗೆಲುವಿನೊಂದಿಗೆ ಬಿ ಗ್ರೂಪ್ನ ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತು. ಜತೆಗೆ ಭಾರತದ ಸೆಮಿಫೈನಲ್ ಹಾದಿಯೂ ಮತ್ತಷ್ಟು ಸುಗಮಗೊಂಡಿದೆ. ಆದರೆ ಬಾಂಗ್ಲಾ ಈ ಸೋಲಿನಿಂದ ಕೂಟದಿಂದ ಬಹುತೇಕ ಹೊರಬಿದ್ದಂತಾಗಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಬುಧವಾರದ ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ರಾಹುಲ್ (50) ಮತ್ತು ವಿರಾಟ್ ಕೊಹ್ಲಿ(64* ) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ಗೆ 184 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಮಳೆಯಿಂದ ಕಡಿತಗೊಂಡ 16 ಓವರ್ನಲ್ಲಿ 6 ವಿಕೆಟ್ಗೆ 145 ರನ್ ಗಳಿಸಿ ಸೋಲನುಭವಿಸಿತು.
ಮಳೆಯಿಂದ ಓವರ್ ಕಡಿತ
ಚೇಸಿಂಗ್ ನಡೆಸುತ್ತಿದ ಬಾಂಗ್ಲಾ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ ಉತ್ತಮ ಸ್ಥಿಯಲ್ಲಿತ್ತು. ಈ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಬಳಿಕ ಪಂದ್ಯವನ್ನು 16 ಓವರ್ಗೆ ಸೀಮಿತ ಗೊಳಿಸಿ ಬಾಂಗ್ಲಾದೇಶಕ್ಕೆ 151 ರನ್ ಗುರಿ ನಿಗದಿಪಡಿಸಲಾಯಿತು. ಅದಾಗಲೇ ಬಾಂಗ್ಲಾದೇಶ 7 ಓವರ್ನಲ್ಲಿ 66 ರನ್ ಗಳಿಸಿತ್ತು. ಆಗ ಬಾಂಗ್ಲಾದೇಶಕ್ಕೆ 54 ಎಸೆತದಲ್ಲಿ 85 ರನ್ ಅವಶ್ಯವಿತ್ತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ಅದಾಗಲೇ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಆದರೆ ಆರಂಭಿಕರಾದ ಲಿಟ್ಟನ್ ದಾಸ್ ಮತ್ತು ಶಂಟೋ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡು ಅಂತಿಮವಾಗಿ ಸೋಲಿನ ಸುಳಿಗೆ ಸಿಲುಕಿತು.
ಅಂತಿಮ ಓವರ್ನಲ್ಲಿ ಬಾಂಗ್ಲಾ ತಂಡಕ್ಕೆ ಗೆಲುವಿಗೆ 20 ರನ್ ಅಗತ್ಯವಿತ್ತು. ಈ ಓವರ್ ಎಸೆಯಲು ಬಂದ ಅರ್ಶ್ದೀಪ್ ಸಿಂಗ್ ಎರಡನೇ ಎಸೆತದಲ್ಲಿ ಸಿಕ್ಸರ್ ಮತ್ತು ನಾಲ್ಕನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಡುವ ಮೂಲಕ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು, ಆಗ ಅಂತಿಮ ಎಸೆತದಲ್ಲಿ ಬಾಂಗ್ಲಾ ಗೆಲುವಿಗೆ 7 ರನ್ ಅಗತ್ಯವಿತ್ತು. ಈ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟ ಅರ್ಶ್ದೀಪ್ ಸಿಂಗ್ ಭಾರತಕ್ಕೆ 5 ರನ್ ಜಯ ತಂದಿತ್ತರು.
ಲಿಟ್ಟನ್ ದಾಸ್ ಸ್ಫೋಟಕ ಬ್ಯಾಟಿಂಗ್
ಚೇಸಿಂಗ್ ವೇಳೆ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಜಿದ್ದಿಗೆ ಬಿದ್ದವರಂತೆ ಭಾರತದ ಬೌಲರ್ಗಳಿಗೆ ಸಿಕ್ಸರ್ ಮತ್ತು ಬೌಂಡರಿ ರುಚಿ ತೋರಿಸಿದರು. ಕೇವಲ 27 ಎಸೆತದಲ್ಲಿ 60 ರನ್ ಸಿಡಿಸಿದರು. ಈ ವೇಳೆ 7 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಯಿತು. ಅಶ್ವಿನ್ ಅವರ ಓವರ್ನಲ್ಲಿ ರನ್ ಓಡುವ ಯತ್ನದಲ್ಲಿ ರಾಹುಲ್ ಅವರ ಡೈರೆಕ್ಟ್ ಥ್ರೋಗೆ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇಲ್ಲಿಗೆ ಭಾರತದದ ಕೈ ಮೇಲಾಯಿತು. ಲಿಟ್ಟನ್ ದಾಸ್ ಮತ್ತು ಶಂಟೋ ಮೊದಲ ವಿಕೆಟ್ಗೆ 68 ರನ್ ಒಟ್ಟುಗೂಡಿಸಿದರೂ ಇನ್ನುಳಿದ ಆಟಗಾರರು ವೈಫಲ್ಯ ಅನುಭವಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಕೊಹ್ಲಿ ಅರ್ಧಶತಕ
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆರಂಭದಿಂದಲೇ ಬಾಂಗ್ಲಾ ಬೌಲರ್ಗಳ ಮೇಲೆರಗಿದ ಕೊಹ್ಲಿ 44 ಎಸೆತದಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನೊಂದಿಗೆ ಅಜೇಯ 64 ರನ್ ಗಳಿಸಿದರು. ಇದರ ಜತೆಗೆ ಟಿ20 ವಿಶ್ವ ಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವ ದಾಖಲೆಯನ್ನು ಕೊಹ್ಲಿ ಬರೆದರು. ಈ ಮೊದಲು ಲಂಕಾದ ಮಹೇಲ ಜಯವರ್ಧನೆ (1016) ಅವರ ಹೆಸರಿನಲ್ಲಿದ ಈ ದಾಖಲೆ ಮುರಿಯಿತು. ಅಂತಿಮವಾಗಿ ಆರ್. ಅಶ್ವಿನ್ ಅಜೇಯ 16 ರನ್ ಗಳಿಸಿದರು.
ಕಳಪೆ ಬ್ಯಾಟಿಂಗ್ನಿಂದ ಹೊರ ಬಂದ ರಾಹುಲ್
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ಆರಂಭದಲ್ಲಿ ಕೊಂಚ ನಿಧಾನ ಗತಿಯ ಬ್ಯಾಟಿಂಗ್ಗೆ ಮುಂದಾದ ರಾಹುಲ್, ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. 32 ಎಸೆತ ಎದುರಿಸಿದ ಅವರು ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಶಕಿಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ(2) ಒಂದು ಜೀವದಾನ ಪಡೆದರೂ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವೈಫಲ್ಯ ಕಂಡರು. ಕ್ಯಾಚ್ ಬಿಟ್ಟ ಹಸನ್ ಮಹ್ಮುದ್ ಮುಂದಿನ ಓವರ್ನಲ್ಲಿ ರೋಹಿತ್ ವಿಕೆಟ್ ಕಿತ್ತರು. ಉಳಿದಂತೆ ಸೂರ್ಯಕುಮಾರ್ 16 ಎಸೆತದಲ್ಲಿ 30 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರ್‌ಗಳಲ್ಲಿ 184/6 (ವಿರಾಟ್ ಕೊಹ್ಲಿ 64*, ಕೆ.ಎಲ್.ರಾಹುಲ್ 50, ಹಸನ್ ಮೆಹ್ಮೂದ್ 47ಕ್ಕೆ3).
ಬಾಂಗ್ಲಾದೇಶ: 16 ಓವರ್‌ಗಳಲ್ಲಿ 6 ವಿಕೆಟ್ಗೆ 145 (ಲಿಟ್ಟನ್ ದಾಸ್ 66, ಶಂಟೊ 21, ಹಾರ್ದಿಕ್ ಪಾಂಡ್ಯ 28ಕ್ಕೆ 2, ಅರ್ಶ್ದೀಪ್ ಸಿಂಗ್ 38ಕ್ಕೆ2)
ಇದನ್ನೂ ಓದಿ | Virat Kohli | ಕಿಂಗ್ ಕೊಹ್ಲಿ ಈಗ ಟಿ20 ವಿಶ್ವ ಕಪ್ ಟಾನ್ ರನ್ ಸರದಾರ!