ಅಡಿಲೇಡ್: ಟಿ20 ವಿಶ್ವ ಕಪ್ನ ಬುಧವಾರದ ಸೂಪರ್-12 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ(IND VS BANGLA) ತಂಡ ರಾಹುಲ್ (50) ಮತ್ತು ವಿರಾಟ್ ಕೊಹ್ಲಿ(64* ) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ಗೆ 184 ರನ್ ಗಳಿಸಿ ಸವಾಲೊಡ್ಡಿದೆ. ಬಾಂಗ್ಲಾ ತಂಡ ಗೆಲುವಿಗೆ 185 ರನ್ ಪೇರಿಸಬೇಕಿದೆ.
ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ಆರಂಭದಲ್ಲಿ ಕೊಂಚ ನಿಧಾನ ಗತಿಯ ಬ್ಯಾಟಿಂಗ್ಗೆ ಮುಂದಾದ ರಾಹುಲ್, ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. 32 ಎಸೆತ ಎದುರಿಸಿದ ಅವರು ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಶಕಿಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ(2) ಒಂದು ಜೀವದಾನ ಪಡೆದರೂ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವೈಫಲ್ಯ ಕಂಡರು. ಕ್ಯಾಚ್ ಬಿಟ್ಟ ಹಸನ್ ಮಹ್ಮುದ್ ಮುಂದಿನ ಓವರ್ನಲ್ಲಿ ರೋಹಿತ್ ವಿಕೆಟ್ ಕಿತ್ತರು. ಉಳಿದಂತೆ ಸೂರ್ಯಕುಮಾರ್ 16 ಎಸೆತದಲ್ಲಿ 30 ರನ್ ಗಳಿಸಿದರು.
ಕೊಹ್ಲಿ ಅರ್ಧಶತಕ
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆರಂಭದಿಂದಲೇ ಬಾಂಗ್ಲಾ ಬೌಲರ್ಗಳ ಮೇಲೆರಗಿದ ಕೊಹ್ಲಿ 44 ಎಸೆತದಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನೊಂದಿಗೆ ಅಜೇಯ 64 ರನ್ ಗಳಿಸಿದರು. ಇದರ ಜತೆಗೆ ಟಿ20 ವಿಶ್ವ ಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವ ದಾಖಲೆಯನ್ನು ಕೊಹ್ಲಿ ಬರೆದರು. ಈ ಮೊದಲು ಲಂಕಾದ ಮಹೇಲ ಜಯವರ್ಧನೆ (1016) ಅವರ ಹೆಸರಿನಲ್ಲಿದ ಈ ದಾಖಲೆ ಮುರಿಯಿತು. ಅಂತಿಮವಾಗಿ ಆರ್. ಅಶ್ವಿನ್ ಅಜೇಯ 16 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರ್‌ಗಳಲ್ಲಿ 184/6
(ವಿರಾಟ್ ಕೊಹ್ಲಿ 64*, ಕೆ.ಎಲ್.ರಾಹುಲ್ 50, ಹಸನ್ ಮೆಹ್ಮೂದ್ 47/3)
ಇದನ್ನೂ ಓದಿ | Team India | ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಬಿಸಿಸಿಐಗೆ ಹಿಡಿ ಶಾಪ ಹಾಕಿದ ಆಟಗಾರರು