ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಮ್ ಇಂಡಿಯಾ(IND VS BANGLA) ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಡಿಸೆಂಬರ್ 4 ಭಾನುವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯ ಆರಂಭಕ್ಕೆ ಮುನ್ನ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡು ಏಕ ದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಶನಿವಾರ ಬಿಸಿಸಿಐ ತಿಳಿಸಿದೆ.
“ಗಾಯದ ಸಮಸ್ಯೆಗೆ ಸಿಲುಕಿದ ಹಿರಿಯ ವೇಗಿ ಮೊಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ. ಶಮಿ ಜಾಗಕ್ಕೆ ಬದಲಿ ಆಟಗಾರನಾಗಿ ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿದೆ. ಏಕದಿನ ಸರಣಿ ಮಾತ್ರವಲ್ಲದೆ ಡಿಸೆಂಬರ್ 14 ರಿಂದ ಚಿತ್ತಗಾಂಗ್‌ನಲ್ಲಿ ಆರಂಭವಾಗುವ ಎರಡು ಟೆಸ್ಟ್ ಸರಣಿಗೂ ಶಮಿ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ20 ವಿಶ್ವ ಕಪ್ ಸೆಮಿಫೈನಲ್ ಸೋಲಿನ ಬಳಿಕ ತವರಿಗೆ ಮರಳಿ ತರಬೇತಿಯನ್ನು ಪುನರಾರಂಭಿಸಿದ ಶಮಿ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಲು ಹೇಳಿದ್ದೇವೆ. ಹೀಗಾಗಿ ಶಮಿ ಡಿಸೆಂಬರ್ 1 ರಂದು ಭಾರತ ತಂಡದೊಂದಿಗೆ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ | INDvsBAN | ಭಾರತ ವಿರುದ್ಧದ ಒಡಿಐ ಸರಣಿಗೆ ಹೊಸ ನಾಯಕನನ್ನು ಘೋಷಿಸಿದ ಬಾಂಗ್ಲಾದೇಶ ತಂಡ