ಅಡಿಲೇಡ್: ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಇದೀಗ ಕಳೆದ ಪಂದ್ಯದಲ್ಲಿನ ಲೋಪವನ್ನು ಸರಿಪಡಿಸಿ ರೋಹಿತ್ ಪಡೆ ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ(IND VS BANGLA ) ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳಿಗೂ ಸೆಮಿ ಹಾದಿಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಆದ್ದರಿಂದ ಈ ಪಂದ್ಯವೂ ಹೈವೋಲ್ಟೆಜ್ನಿಂದ ಕೂಡಿರಲಿದೆ.
ಭಾರತಕ್ಕೆ ಮತ್ತೆ ಬ್ಯಾಟಿಂಗ್ ಚಿಂತೆ
ಭಾರತ ತಂಡಕ್ಕೆ ಮತ್ತೆ ಬ್ಯಾಟಿಂಗ್ ಚಿಂತೆ ಕಾಡಲಾರಂಭಿಸಿದೆ. ಒಂದು ಪಂದ್ಯದಲ್ಲಿ ಮಿಂಚಿದರೆ ಮತ್ತೆರಡು ಪಂದ್ಯದಲ್ಲಿ ಕಳಪೆ ಪ್ರದರ್ಶ ತೋರುತ್ತಿರುವುದು ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಆ ಸರದಿಯಲ್ಲಿರುವ ಆಟಗಾರರೆಂದರೆ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮರೆತಂತೆ ಕಾಣುತ್ತಿದೆ. ಹೀಗಾಗಿ ಟೀಕೆಗಳನ್ನು ಎದುರಿಸುವಂತಾಗಿದೆ. ಈ ಪಂದ್ಯದಿಂದ ಅವರನ್ನು ಕೈ ಬಿಟ್ಟರು ಅಚ್ಚರಿಯಿಲ್ಲ. ತಂಡದ ಆಪ್ತರಕ್ಷಕನಾಗಿ ಸದ್ಯಕ್ಕೆ ಸೂರ್ಯಕುಮಾರ್ ಮೇಲೆ ನಂಬಿಕೆ ಇರಿಸಬಹುದು. ಕಳೆದ ಎರಡೂ ಪಂದ್ಯದಲ್ಲಿಯೂ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು.
ದಿನೇಶ್ ಕಾರ್ತಿಕ್ ಅನುಮಾನ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನು ಸ್ನಾಯು ನೋವಿಗೆ ತುತ್ತಾಗಿ ಪಂದ್ಯಿಂದ ಹೊರಗುಳಿದಿದ್ದ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ಚಳಿ ವಾತಾವರಣ ಇರುವುದರಿಂದ ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಗುಣವಾಗಲು 3 ರಿಂದ 5ದಿನಗಳು ಬೇಕಾಗುತ್ತದೆ. ಕಾರ್ತಿಕ್ ಚೇತರಿಕೆಯ ಕುರಿತು ಇದುವರೆಗೂ ತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೆಲ್ಲವನ್ನೂ ಗಮನಿಸುವಾಗ ಕಾರ್ತಿಕ್ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಕಷ್ಟಸಾಧ್ಯ ಎನ್ನಬಹುದು. ಒಂದೆಮ್ಮೆ ಕಾರ್ತಿಕ್ ಹೊರಗುಳಿದರೆ ಆಗ ರಿಷಭ್ ಪಂತ್ಗೆ ಅವಕಾಶ ಸಿಗಬಹುದು.
ಪಂತ್ಗೆ ಅವಕಾಶ ನಿರೀಕ್ಷೆ
ಗಾಯಾಳು ದಿನೇಶ್ ಕಾರ್ತಿಕ್ ಫಿಟ್ ಆದರೂ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ರಿಷಭ್ ಪಂತ್ ಅವರನ್ನೇ ಆಡಿಸುವುದು ಉತ್ತಮ ಎಂಬ ಮಾತುಗಳೂ ಈಗಾಗಲೆ ಕೇಳಿಬಂದಿವೆ. ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಆಕ್ರಮಣಕಾರಿ ನಿರ್ವಹಣೆ ತೋರಿದ ದಾಖಲೆ ಹೊಂದಿರುವ ಪಂತ್, ಕೆಲ ಹೊಡೆತಗಳನ್ನು ಕಾರ್ತಿಕ್ಗಿಂತ ಚೆನ್ನಾಗಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಅಗ್ರ ಕ್ರಮಾಂಕದಲ್ಲಿ ಕಾಡುತ್ತಿರುವ ಬ್ಯಾಟಿಂಗ್ ಸಮಸ್ಯೆಗೆ ಪಂತ್ ಉತ್ತಮ ಆಯ್ಕೆ ಎಂಬ ಟಾಕ್ಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಪಂತ್ಗೆ ಅವಕಾಶ ನೀಡಿದರೂ ಅಚ್ಚರಿ ಪಡಬೇಕಿಲ್ಲ.
ಬಾಂಗ್ಲಾ ಸಾಮಾನ್ಯ ತಂಡ
ಭಾರತ ತಂಡಕ್ಕೆ ಹೋಲಿಸಿದರೆ ಬಾಂಗ್ಲಾದೇಶ ತಂಡದಲ್ಲಿ ಅಪಾಯಕಾರಿ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಭಾರತ ಬಾಂಗ್ಲಾ ಹುಲಿಗಳ ಸವಾಲನ್ನು ಕಡೆಗಣಿಸುವಂತಿಲ್ಲ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಸಣ್ಣ ಮೊತ್ತ ಪೇರಿಸಿದರೂ. ಟೀಮ್ ಇಂಡಿಯಾ ಬೌಲರ್ಗಳು ಸಮರ್ಥ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಅಂತಿಮ ಓವರ್ ತನಕ ತಂದ ಪರಿ ಅದ್ಭುತ. ಆದರೆ ಈ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕಳಪೆ ಫೀಲ್ಡಿಂಗ್ ನಡೆಸದೆ ಇದ್ದರೆ ಭಾರತಕ್ಕೆ ಗೆಲ್ಲುವ ಅವಕಾಶವೊಂದಿತ್ತು. ಆದ್ದರಿಂದ ಬಾಂಗ್ಲಾ ವಿರುದ್ಧ ಇಂತಹದ್ದೇ ತಪ್ಪುಗಳು ಫೀಲ್ಡಿಂಗ್ನಲ್ಲಿ ಸಂಭವಿಸಿದರೆ ಗೆಲ್ಲುವ ಪಂದ್ಯವನ್ನು ಸೋಲುವಂತಾದಿತು. ಈ ನಿಟ್ಟಿನಲ್ಲಿ ಎಚ್ಚರಿಕೆ ಮತ್ತು ಗುಣಮಟ್ಟದ ಫೀಲ್ಡಿಂಗ್ ಅತ್ಯಗತ್ಯ.
ಸಂಭಾವ್ಯ ತಂಡ
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ/ಅಕ್ಷರ್ ಪಟೇಲ್, ಆರ್.ಅಶ್ವಿನ್/ಯಜುವೇಂದ್ರ ಚಹಲ್, ದಿನೇಶ್ ಕಾರ್ತಿಕ್/ರಿಷಭ್ ಪಂತ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್.
ಬಾಂಗ್ಲಾದೇಶ: ಶಕಿಬ್ ಅಲ್ ಹಸನ್(ನಾಯಕ), ಶಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಅಫಿಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್, ಮೊಸ್ದೆಕ್ ಹೊಸೈನ್, ಟಸ್ಕಿನ್ ಅಹ್ಮದ್, ಹಸನ್ ಮಹ್ಮುದ್, ಮುಸ್ತಾಫಿಜುರ್ ರೆಹಮಾನ್.
ಇದನ್ನೂ ಓದಿ | IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ