ಢಾಕಾ: ಟಿ20 ವಿಶ್ವ ಕಪ್ ಸೆಮಿಫೈನಲ್ ಸೋಲಿನ ಬಳಿಕ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾದ ಹಿರಿಯ ಆಟಗಾರರು ತಂಡಕ್ಕೆ ವಾಪಸಾಗಿದ್ದು ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.(IND VS BANGLA) ಭಾನುವಾರ ಮೊದಲ ಪಂದ್ಯವನ್ನಾಡುವ ಮೂಲಕ ಸರಣಿಗೆ ಚಾಲನೆ ದೊರೆಯಲಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳಿಗೂ ಗಾಯದ ಸಮಸ್ಯೆ ಕಾಡಿದೆ. ಶನಿವಾರ ಭಾರತ ತಂಡದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಅತ್ತ ಬಾಂಗ್ಲಾ ಪರ ತಮಿಮ್ ಇಕ್ಬಾಲ್ ತೊಡೆ ಸಂಧು ನೋವಿನ ಸರಣಿಯಿಂದ ಹೊರಬಿದ್ದಿದ್ದು ಅವರ ಸ್ಥಾನಕ್ಕೆ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರಿಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಜತೆಗೆ ತಂಡದ ಪ್ರಧಾನ ಬೌಲರ್ ಟಸ್ಕಿನ್ ಅಹ್ಮದ್ ಅವರು ಬೆನ್ನುನೋವಿನಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಿಗಾಗಿ ಇತ್ತಂಡಗಳಿಗೂ ಗಾಯ ಚಿಂತೆ ಕಾಡಿದೆ.
ರಾಹುಲ್ ಮತ್ತು ರೋಹಿತ್ಗೆ ಅಗ್ನಿ ಪರೀಕ್ಷೆ
ನ್ಯೂಜಿಲ್ಯಾಂಡ್ ಸರಣಿಯಲ್ಲಿ ವಿಶ್ರಾಂತಿ ವಹಿಸಿದ್ದ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಈಗ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇವರಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ರಾಹುಲ್ ಮತ್ತು ರೋಹಿತ್ಗೆ ಈ ಪಂದ್ಯ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿ ಟೀಮ್ ಇಂಡಿಯಾದ ವಿಶ್ವ ಕಪ್ ಅಭಿಯಾನದ ತಯಾರಿಗೆ ನಾಂದಿಯಾಗಬಹುದು. ಸ್ವತಃ ತಂಡದ ನಾಯಕ ರೋಹಿತ್ ಮತ್ತು ರಾಹುಲ್ ಫಾರ್ಮ್ ಕಳೆದುಕೊಂಡು ಸಾಕಷ್ಟು ದಿನಗಳೇ ಕಳೆದಿವೆ. ಹೀಗಾಗಿ ಈ ಏಕದಿನ ಸರಣಿ ಇವರಿಬ್ಬರ ಪಾಲಿಗೆ ಅಗ್ನಿ ಪರೀಕ್ಷೆ ಎನ್ನಲಡ್ಡಿಯಿಲ್ಲ.
ತವರಿನಲ್ಲಿ ಬಾಂಗ್ಲಾ ಬಲಿಷ್ಠ
ಕಳೆದ ವರ್ಷ ಆಗಸ್ಟ್ನಲ್ಲಿ ಬಾಂಗ್ಲಾದಲ್ಲಿ ನಡೆದ 5 ಟಿ20 ಪಂದ್ಯಗಳ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದೂ ಪಂದ್ಯಗಳಲ್ಲಿ ಸೋಲಿಸುವ ಮೂಲಕ ಬಾಂಗ್ಲಾ ತಂಡ ತವರಿನಲ್ಲಿ ತಾನೆಷ್ಟು ಬಲಿಷ್ಠ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿತ್ತು. ಇದೀಗ ಭಾರತ ತಂಡವೂ ಬಾಂಗ್ಲಾ ಹುಲಿಗಳ ಸವಾಲನ್ನು ಕಡೆಗಣಿಸುವಂತಿಲ್ಲ. ಬಾಂಗ್ಲಾ ಪರ ಹಿರಿಯ ಆಟಗಾರ ಶಕಿಬ್ ಅಲ್ ಹಸನ್ ಯಾವ ಕ್ಷಣದಲ್ಲಾದರೂ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ತಂಡದ ನೆರವಿಗೆ ಧಾವಿಸಬಲ್ಲರು. ಆದ್ದರಿಂದ ಇವರ ಮೇಲೆ ವಿಶೇಷವಾದ ನಿಗಾವೊಂದನ್ನು ರೋಹಿತ್ ಪಡೆ ಇಡಬೇಕಿದೆ.
ಇದನ್ನೂ ಓದಿ | INDvsBAN | ನಮ್ಮನ್ನು ಬೆಂಬಲಿಸದ ಅಭಿಮಾನಿಗಳು ಇರುವುದು ಇದೊಂದೇ ದೇಶದಲ್ಲಿ ಎಂದ ರೋಹಿತ್ ಶರ್ಮ