ಢಾಕಾ: ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ(IND VS BANGLA) ಸಜ್ಜಾಗಿದ್ದು ನ್ಯೂಜಿಲ್ಯಾಂಡ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಹಾಗೂ ಇತರೆ ಆಟಗಾರರು ಗುರುವಾರ ಢಾಕಾ ತಲುಪಿದ್ದಾರೆ.
ಸದ್ಯ ನ್ಯೂಜಿಲ್ಯಾಂಡ್ನಲ್ಲಿರುವ ಶಿಖರ್ ಧವನ್ ಹಾಗೂ ವಾಷಿಂಗ್ಟನ್ ಸುಂದರ್ ಶುಕ್ರವಾರ ಭಾರತ ತಂಡ ಸೇರಿಕೊಳ್ಳಲಿದ್ದಾರೆ. ಉಳಿದ ಎಲ್ಲ ಆಟಗಾರರು ಗುರುವಾರ ಬಾಂಗ್ಲಾ ತಲುಪಿದ್ದು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಬಳಿಕ ಶುಕ್ರವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. ಭಾರತ ಹಾಗೂ ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯ ಭಾನುವಾರ(ಡಿಸೆಂಬರ್ 4) ಢಾಕಾದಲ್ಲಿ ನಡೆಯಲಿದೆ.
ನ್ಯೂಜಿಲ್ಯಾಂಡ್ ಸರಣಿ ವೇಳೆ ವಿಶ್ರಾಂತಿಯಲ್ಲಿದ್ದ ರೋಹಿತ್ ಮತ್ತೆ ಏಕದಿನ ಮತ್ತು ಟೆಸ್ಟ್ ಸರಣಿ ಮೂಲಕ ನಾಯಕತ್ವದ ಜವಾಬ್ದಾರಿಗೆ ಹಿಂತಿರುಗಿದ್ದಾರೆ. ಬಾಂಗ್ಲಾದೇಶ ತಂಡವನ್ನು ತಮಿಮ್ ಇಕ್ಬಾಲ್ ಮುನ್ನಡೆಸಲಿದ್ದಾರೆ.
ಬಾಂಗ್ಲಾ ಪ್ರವಾಸದಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟಿ20 ವಿಶ್ವ ಕಪ್ ಸೋಲಿನ ಬಳಿಕ ರೋಹಿತ್, ವಿರಾಟ್ ಮತ್ತು ಕೆ.ಎಲ್. ರಾಹುಲ್ ಅವರು ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಉಳಿದಂತೆ ಭಾರತ ಪರ ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಕುಲ್ದೀಪ್ ಸೇನ್ ಹೊಸ ಮುಖಗಳಾಗಿದ್ದು ಈ ಸರಣಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ | IND VS NZ | ರಿಷಭ್ ಪಂತ್ ಮ್ಯಾಚ್ ವಿನ್ನಿಂಗ್ ಆಟಗಾರ; ಧವನ್ ಹೀಗೆ ಹೇಳಿದ್ದು ಏಕೆ?