ಅಡಿಲೇಡ್: ಬುಧವಾರ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ(IND VS BANGLA) ನಡುವಿನ ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯಕ್ಕೆ ಶೇ.70 ರಷ್ಟು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡದ ಮುಂದಿನ ಸ್ಥಿತಿ ಏನು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಪಂದ್ಯ ರದ್ದಾದರೆ ಕಷ್ಟ
ಒಂದು ವೇಳೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಈ ಪಂದ್ಯ ಮಳೆಯಿಂದಾಗಿ ನಡೆಯದಿದ್ದರೆ ಸೆಮಿಫೈನಲ್‌ಗೆ ಹೋಗುವ ಉಭಯ ತಂಡಗಳ ಆಸೆಗೆ ಹಿನ್ನಡೆಯಾಗಬಹುದು. ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನವನ್ನು ಗಮನಿಸಿದರೆ, ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಭಾರತ ತಂಡ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಬಾಂಗ್ಲಾದೇಶದ ಸ್ಥಿತಿಯೂ ಕೂಡ ಇದೇ ರೀತಿಯಲ್ಲಿದೆ. ನಾಲ್ಕು ಅಂಕಗಳನ್ನು ಹೊಂದಿದೆ. ಆದರೆ ಅದು ನೆಟ್ ರನ್ ರೇಟ್‌ನಲ್ಲಿ ಭಾರತಕ್ಕಿಂತ ಹಿಂದಿರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯ ಮಳೆಯಿಂದ ನಡೆಯಲು ಸಾಧ್ಯವಾಗದೇ ಇದ್ದರೆ ಎರಡೂ ತಂಡಗಳಿಗೂ ಒಂದು ಅಂಕ ನೀಡಲಾಗುತ್ತದೆ. ಆದರೂ ಅಂಕ ಪಟ್ಟಿಯಲ್ಲಿ ಏರಿಳಿತ ಕಾಣುವುದಿಲ್ಲ. ಈಗ ಇದ್ದ ಸ್ಥಾನದಲ್ಲಿಯೇ ಉಭಯ ತಂಡಗಳು ಇರಲಿವೆ. ಆದರೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿವೆ. ಅಲ್ಲದೆ ನೆಟ್ ರನ್‌ರೇಟ್ ಸುಧಾರಣೆಯನ್ನೂ ಕಾಣಬೇಕಿದೆ. ಇದು ಕೂಡ ಸೆಮಿಫೈನಲ್‌ಗೆ ಹೋಗುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.
ಮುಖಾಮುಖಿ
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಈವರೆಗೆ ಒಟ್ಟು 11 ಟಿ20 ಪಂದ್ಯಗಳು ನಡೆದಿದೆ. ಇದರಲ್ಲಿ ಭಾರತ ತಂಡ ಭರ್ಜರಿ 10 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಬಾಂಗ್ಲಾ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ತಂಡ ಬಲಿಷ್ಠವಾಗಿ ಗೋಚರಿಸಿದೆ.
ಪಂದ್ಯ ಆರಂಭ
ಮಧ್ಯಾಹ್ನ 1.30 (ಭಾರತೀಯ ಕಾಲಮಾನ)
ಸ್ಥಳ: ಓವಲ್ ಸ್ಟೇಡಿಯಂ, ಅಡಿಲೇಡ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇದನ್ನೂ ಓದಿ| IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ