ಅಡಿಲೇಟ್: ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND VS BANGLA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಐಸಿಸಿ ಟಿ20 ವಿಶ್ವ ಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎಂದು ವರದಿಯಾಗಿದೆ.
ಅಡಿಲೇಡ್ನಲ್ಲಿಯೂ ಮಳೆ ಆತಂಕ
ಮೆಲ್ಬೋರ್ನ್ ಮತ್ತು ಸಿಡ್ನಿ ಬಳಿಕ ಟೀಮ್ ಇಂಡಿಯಾಕ್ಕೆ ಅಡಿಲೇಡ್ನಲ್ಲಿಯೂ ಮಳೆಯ ಭೀತಿ ಎದುರಾಗಿದೆ. ಬುಧವಾರ ಮಳೆ ಬರುವ ಸಾಧ್ಯತೆ ಶೇ.70ರಷ್ಟು ಇದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಮಂಗಳವಾರ ಅಡಿಲೇಡ್ನಲ್ಲಿ ಧಾರಾಕಾರ ಮಳೆಯಾಗಿದ್ದು, ಚಳಿಯೂ ಸಾಕಷ್ಟು ಹೆಚ್ಚಾಗಿದೆ. ಒಂದೊಮ್ಮೆ ಪಂದ್ಯದ ವೇಳೆ ವಿಪರೀತ ಮಳೆಯಾಗದಿದ್ದರೂ ತುಂತುರು ಮಳೆಯಂತು ಕಾಣಿಸಬಹುದು. ಹೀಗಾಗಿ ಓವರ್ ಕಡಿತಗೊಂಡರು, ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ದಾಖಲಾಗುವ ನಿರೀಕ್ಷೆ ಇದೆ. ಹಾಲಿ ವಿಶ್ವ ಕಪ್ನಲ್ಲಿ ಈಗಾಗಲೆ ಮಳೆಯಿಂದಾಗಿ 4 ಪಂದ್ಯಗಳು ರದ್ದುಗೊಂಡಿದ್ದು, ಸೆಮಿಫೈನಲ್ ಲೆಕ್ಕಾಚಾರದಲ್ಲಿ ಸಾಕಷ್ಟು ಏರುಪೇರು ತಂದಿದೆ. ಇನ್ನು ಸೂಪರ್12 ಹಂತದ ನಿರ್ಣಾಯಕ ಸಮಯದಲ್ಲಿ ಮಳೆ ಕಾಡಿದರೆ ಕೆಲ ತಂಡಗಳ ಅವಕಾಶಕ್ಕೆ ಕಲ್ಲು ಬೀಳಬಹುದು. ಆದರೆ ಭಾರತಕ್ಕೆ ಬಾಂಗ್ಲಾ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದುಗೊಂಡರೂ, ಜಿಂಬಾಬ್ಬೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದು ಉಪಾಂತ್ಯಕ್ಕೆರುವ ಅವಕಾಶ ಜೀವಂತವಾಗಿರಲಿದೆ.
ಪಿಚ್ ರಿಪೋರ್ಟ್
ಅಡಿಲೇಡ್ ಓವಲ್ ಮೈದಾನ ಬ್ಯಾಟರ್ಗಳಿಗೆ ಮತ್ತು ಬೌಲರ್ಗಳಿಗೆ ಅನುಕೂಲಕರವಾಗಿದೆ. ಆದರೆ ಬೌಂಡರಿ ಲೈನ್ ದೂರ ಇರುವ ಕಾರಣ ಬೌಲರ್ಗಳಿಗೆ ಅಧಿಕ ಲಾಭ. ಬ್ಯಾಟರ್ಗಳು ಇಲ್ಲಿ ಸಂಪೂರ್ಣ ಬಲದೊಂದಿಗೆ ಬ್ಯಾಟ್ ಬೀಸಬೇಕಾಗಿದೆ. ಮಂಜು ಕವಿದ ವಾತಾವರಣ ಇರುವುದರಿಂದ ಇಬ್ಬನಿ ಸಮಸ್ಯೆಯೂ ಕಾಡುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೌಲರ್ಗಳಿಗೆ ಚೆಂಡನ್ನು ನಿರ್ಧಿಷ್ಟ ಗುರಿಯೆಡೆಗೆ ಎಸೆಯಲು ಕಷ್ಟಸಾಧ್ಯ.
ಇದನ್ನೂ ಓದಿ | Neeraj Chopra | ಒಂದು ಪರೋಟ ತಿಂದರೂ ಕೋಚ್ ದಂಡ ವಿಧಿಸುತ್ತಾರೆ; ನೀರಜ್ ಚೋಪ್ರಾ ಆರೋಪ