ನ್ಯೂಯಾರ್ಕ್: ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಂಡು ಒಂದಂಕಿಗೆ ಸೀಮಿತರಾದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅವರನ್ನು ಕೆನಡಾ(IND vs CAN) ವಿರುದ್ಧದ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈಗಾಗಲೇ ಭಾರತ(Team India) ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಸೂಪರ್-8ಗೆ ಅರ್ಹತೆ ಪಡೆದಿದೆ. ಹೀಗಾಗಿ ಕೊಹ್ಲಿ ಅವರಿಗೆ ಅಂತಿಮ ಪಂದ್ಯದಲ್ಲಿ ಬಿಸಿಸಿಐ ವಿಶ್ರಾಂತಿ ನೀಡಲು ಬಯಸಿದೆ ಎಂದು ತಿಳಿದುಬಂದಿದೆ. ಕೊಹ್ಲಿ ಮಾತ್ರವಲ್ಲದೆ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅವರಿಗೂ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಕುಲ್ದೀಪ್ ಮತ್ತು ಯಜುವೇಂದ್ರ ಚಹಲ್ ಅವರನ್ನು ಆಡಿಸುವ ಸಾಧ್ಯತೆ ಕಂಡುಬಂದಿದೆ.
ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 700ಕ್ಕೂ ಅಧಿಕ ರನ್ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ, ಈ ಯಶಸ್ಸು ಕೊಹ್ಲಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೈ ಹಿಡಿಯಲಿಲ್ಲ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್ ಆಗಿದೆ.
ಇದನ್ನೂ ಓದಿ IND vs USA: ಕೊಹ್ಲಿಯ ವಿಕೆಟ್ ಪತನ ಕಂಡು ದಂಗಾದ ರೋಹಿತ್ ಶರ್ಮ; ವಿಡಿಯೊ ವೈರಲ್
ಕೊಹ್ಲಿ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ ಆಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಕೆನಡಾ ವಿರುದ್ಧದ ಪಂದ್ಯ ನಡೆಯುವುದು ಕೂಡ ಅನುಮಾನ ಎನ್ನುವಂತಿದೆ. ಪಂದ್ಯ ನಡೆಯುವ ಫ್ಲೊರಿಡಾದಲ್ಲಿ ಈಗಾಗಲೇ ಭಾರೀ ಮಳೆ ಸುರಿದು ರಸ್ತೆಗಳೆಲ್ಲ ಹೊಳೆಯಂತಾಗಿದೆ. ಸೂಪರ್ 8ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಭಾರತಕ್ಕೆ ಎದುರಾಗುವ ಸಾಧ್ಯತೆ ಕಂಡು ಬಂದಿದೆ.
ಕೆನಡಾ ವಿರುದ್ಧದ ಪಂದ್ಯ ಮುಕ್ತಾಯಗೊಂಡ ತಕ್ಷಣ ಶುಭಮನ್ ಗಿಲ್(Shubman Gill) ಮತ್ತು ಅವೇಶ್ ಖಾನ್(Avesh Khan) ತವರಿಗೆ ಮರಳಲಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಜೂನ್ 15ರಂದು ಉಭಯ ಆಟಗಾರರು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದೆ. ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ತಂಡದಲ್ಲಿ ಪ್ರಯಾಣ ಮೀಸಲು ಭಾಗವಾಗಿ ಸ್ಥಾನ ಪಡೆದಿದ್ದರು.
ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!
ಟಿ20 ವಿಶ್ವಕಪ್ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್ ಪಿಚ್ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.
ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್ ಬಾಲ್ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್ ಕಂಡಿರುವುದು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನುವಂತಿದೆ.