Site icon Vistara News

IND vs END 2nd Test: ದ್ವಿತೀಯ ಟೆಸ್ಟ್​ನಲ್ಲಿ ಹಿಡಿತ ಸಾಧಿಸಿದ ಭಾರತ; 171 ರನ್​ ಲೀಡ್​

India vs England, 2nd Test

ವಿಶಾಖಪಟ್ಟಣಂ: ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್(IND vs END 2nd Test)​ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171 ರನ್​ ಲೀಡ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಜೈಸ್ವಾಲ್​(15) ಮತ್ತು ರೋಹಿತ್​(13) ರನ್​ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ 6 ವಿಕೆಟ್​ಗೆ 336 ರನ್​ ಗಳಿಸಿದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಭಾರತ, ಯಶಸ್ವಿ ಜೈಸ್ವಾಲ್(209)​ ಅವರ ದ್ವಿಶತಕದ ನೆರವಿನಿಂದ 396 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್​ ಕಳೆದುಕೊಂಡು 253 ರನ್​ಗೆ ಆಲೌಟ್​ ಆಯಿತು. ಭಾರತ ಮಪದಲ ಇನಿಂಗ್ಸ್​ನಲ್ಲಿ 143 ರನ್​ ಲೀಡ್​ ಗಳಿಸಿತು. ಸದ್ಯ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171ರನ್​ ಲೀಡ್​ ಗಳಿಸಿದೆ.

ದ್ವಿಶತಕ ಬಾರಿಸಿದ ಜೈಸ್ವಾಲ್​


ಮೊದಲ ದಿನದಾಟದ ಅಂತ್ಯಕ್ಕೆ 179 ರನ್ ಗಳಿಸಿ ಅಜೇಯರಾಗಿದ್ದ ಉಳಿದಿದ್ದ ಯಶಸ್ವಿ ಜೈಸ್ವಾಲ್(Yashasvi Jaiswal)​ ದ್ವಿತೀಯ ದಿನದಾಟದಲ್ಲಿ 30 ರನ್​ ಒಟ್ಟುಗೂಡಿಸಿ ದ್ವಿಶತಕ ಬಾರಿಸಿದರು. ಇದು ಜೈಸ್ವಾಲ್​ ಅವರ ಚೊಚ್ಚಲ ಟೆಸ್ಟ್​ ದ್ವಿಶತಕವಾಗಿದೆ. ಜತೆಗೆ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡರು. ವಿನೋದ್​ ಕಾಂಬ್ಳಿ ಮತ್ತು ಸುನೀಲ್​ ಗವಾಸ್ಕರ್​ ಮೊದಲಿಗರು. ಸಿಕ್ಸರ್​ ಮೂಲಕ ಶತಕ ಪೂರ್ತಿಗೊಳಿಸಿದ್ದ ಜೈಸ್ವಾಲ್​ ತಮ್ಮ ದ್ವಿಶತಕವನ್ನು ಬೌಂಡರಿ ಮೂಲಕ ಪೂರ್ಣಗೊಳಿಸಿದರು. ಒಟ್ಟು 290 ಎಸೆತ ಎದುರಿಸಿ 19 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್​ ನೆರವಿನಿಂದ 209 ರನ್​ ಬಾರಿಸಿದರು. ಈ ವಿಕೆಟ್​ ಅನುಭವಿ ಜೇಮ್ಸ್​ ಆ್ಯಂಡರ್ಸನ್ ಪಾಲಾಯಿತು. 5 ರನ್​ ಬಾರಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಅಶ್ವಿನ್​ 20ರನ್ ಗಳಿಸಿದರು. ದ್ವಿತೀಯ ದಿನದಾಟದಲ್ಲಿ ಭಾರತ ಒಟ್ಟು 60 ರನ್​ ಗಳಿಸಿ ಆಲೌಟ್​ ಆಯಿತು.

ಇದನ್ನೂ ಓದಿ IND vs ENG 2nd Test: ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳ ಪಟ್ಟಿ ಹೀಗಿದೆ​

ಇಂಗ್ಲೆಂಡ್​ಗೆ ಆಸರೆಯಾದ ಕ್ರಾಲಿ, ಸ್ಟೋಕ್ಸ್​


ಮೊದಲ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ಜಸ್​ಪ್ರೀತ್​ ಬುಮ್ರಾ(Jasprit Bumrah) ಘಾತಕ ಯಾರ್ಕರ್​ ಮೂಲಕ ಕಾಡಿದರು. 45 ರನ್​ಗೆ 6 ವಿಕೆಟ್​ ಕಿತ್ತು ಆಂಗ್ಲರ ಕುಸಿತಕ್ಕೆ ಕಾರಣರಾದರು. ಅದರಲ್ಲೂ ಓಲಿ ಪೋಪ್(Ollie Pope)​ ಮತ್ತು ಬೆನ್​ ಸ್ಟೋಕ್ಸ್​(Ben Stokes) ಅವರನ್ನು ಕ್ಲೀನ್​ ಬೌಲ್ಡ್​ ಮಾಡಿ ವಿಕೆಟ್​ ಚೆಲ್ಲಾಪಿಲ್ಲಿಯಾಗುವಂತೆ ಮಾಡಿದರು. ಈ ಘಾತಕ ಯಾರ್ಕರ್​ ಕಂಡ ಉಭಯ ಆಟಗಾರರು ಕೂಡ ಒಂದು ಕ್ಷಣ ಮೈದಾನದಲ್ಲಿ ಸ್ಟನ್​ ಆಗಿ ನಿಂತುಬಿಟ್ಟರು. 6 ವಿಕೆಟ್​ ಕೀಳುವ ಮೂಲಕ ಬುಮ್ರಾ ಟೆಸ್ಟ್​ನಲ್ಲಿ 150 ವಿಕೆಟ್​ಗಳ ಗಡಿ ದಾಟಿದರು.

ಇಂಗ್ಲೆಂಡ್​ ತಂಡಕ್ಕೆ ಆಸರೆಯಾದದ್ದು ಆರಂಭಿಕ ಆಟಗಾರ ಜಾಕ್​ ಕ್ರಾಲಿ. ದಿಟ್ಟ ಬ್ಯಾಟಿಂಗ್​ ಪ್ರದರ್ಶನ ತೋರಿದ ಅವರು 78 ಎಸೆತಗಳಿಂದ 11 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 76 ರನ್​ ಬಾರಿಸಿದರು. ಇವರ ಅರ್ಧಶತಕದ ಹೋರಾಟದಿಂದ ಇಂಗ್ಲೆಂಡ್​ 250 ರನ್​ ಬಾರಿಸಲು ಸಾಧ್ಯವಾಯಿತು. ನಾಯಕ ಬೆನ್​ ಸ್ಟೋಕ್ಸ್​ 47 ರನ್​ ಬಾರಿಸಿದರು. ಉಳಿದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಆಡಲಿಳಿದ ಕುಲ್​ದೀಪ್​ ಯಾದವ್​ 3 ವಿಕೆಟ್​ ಕಿತ್ತು ಮಿಂಚಿದರು.

Exit mobile version