Site icon Vistara News

IND vs ENG 3rd Test: ಮೂರನೇ ಟೆಸ್ಟ್​ ಪಂದ್ಯಕ್ಕೆ ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ!

Jasprit Bumrah

ಮುಂಬಯಿ: ಇಂಗ್ಲೆಂಡ್(India vs England) ವಿರುದ್ಧದ ಮೊದಲ ಎರಡು ಟೆಸ್ಟ್​(Test series) ಪಂದ್ಯಗಳಲ್ಲಿ ಒಟ್ಟು 57 ಓವರ್​ ಬೌಲಿಂಗ್​ ದಾಳಿ ನಡೆಸಿದ ಜಸ್​ಪ್ರೀತ್​ ಬುಮ್ರಾಗೆ(Jasprit Bumrah) ವಿಶ್ರಾಂತಿ ನೀಡುವತ್ತ ಆಯ್ಕೆದಾರರು ಒಲವು ತೋರಿದೆ. ಹೀಗಾಗಿ ಬುಮ್ರಾ ಮೂರನೇ(IND vs ENG 3rd Test) ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

ವಿಶಾಖಪಟ್ಟಣದಲ್ಲಿ ಮುಕ್ತಾಯ ಕಂಡ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವಲ್ಲಿ ಜಸ್​ಪ್ರೀತ್​ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದ ಎರಡೂ ಇನಿಂಗ್ಸ್​ ಸೇರಿ ಬುಮ್ರಾ 32 ಓವರ್​ ಬೌಲಿಂಗ್​ ನಡೆಸಿ ಒಟ್ಟು 9 ವಿಕೆಟ್​ ಉರುಳಿಸಿದ್ದರು. ಅತಿಯಾದ ಕಾರ್ಯದೊತ್ತಡದಿಂದ ಬುಮ್ರಾ ಬಳಲಿದ್ದಾರೆ ಎನ್ನುವ ನಿಟ್ಟಿನಲ್ಲಿ ಆಯ್ಕೆ ಸಮಿತಿಯೂ ಅವರಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

ಬುಮ್ರಾ ಅವರಿಗೆ 3ನೇ ಪಂದ್ಯಕ್ಕೆ ವಿಶ್ರಾಂತಿ ನೀಡಿದರೆ, ಅವರು ಮುಂದಿನ ಪಂದ್ಯದ ವೇಳೆಗೆ ಫುಲ್​ ರಿಫ್ರೆಶ್​ ಆಗಿ ತಂಡಕ್ಕೆ ಮರಳಲಿದ್ದಾರೆ. ಮಾನಸಿಕವಾಗಿಯೂ ಅವರು ಸಂಪೂರ್ಣ ಸಿದ್ಧರಾಗಿರುತ್ತಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಕ್ರಿಕ್​ಇನ್ಫೋ ವರದಿ ಮಾಡಿದೆ. ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲೇ ಮೊಹಮ್ಮದ್​ ಸಿರಾಜ್​ ಅವರಿಗೆ ಆಯ್ಕೆ ಸಮಿತಿ ದ್ವಿತೀಯ ಪಂದ್ಯಕ್ಕೆ ವಿಶ್ರಾಂತಿ ನೀಡಿತ್ತು. ಇದೀಗ ಬುಮ್ರಾ ಸರದಿ. ಬುಮ್ರಾ ವಿಶ್ರಾಂತಿ ಪಡೆದರೆ ಅವರ ಸ್ಥಾನದಲ್ಲಿ ಸಿರಾಜ್​ ಆಡಲಿಳಿಯಬಹುದು.

ಕೊಹ್ಲಿ ಅನುಮಾನ


ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ(IND vs ENG) ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾದ ವಿರಾಟ್​ ಕೊಹ್ಲಿ(Virat Kohli) ಅವರು ಮುಂದಿನ ಟೆಸ್ಟ್​ ಪಂದ್ಯಗಳಿಗೆ ತಂಡ ಸೇರಲಿದ್ದಾರಾ ಎನ್ನುವ ಬಗ್ಗೆ ಬಿಸಿಸಿಐ(BCCI) ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಅವರು ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

​ಮೂಲಗಳ ಪ್ರಕಾರ ಗಾಯದ ಸಮಸ್ಯೆ ಎದುರಿಸುತ್ತಿರುವ ಮೊಹಮ್ಮದ್​ ಶಮಿ(Mohammed Shami), ರವೀಂದ್ರ ಜಡೇಜಾ(Ravindra Jadeja) ಹಾಗೂ ವೈಯಕ್ತಿಕ ಕಾರಣ ನೀಡಿ ರಜೆಯಲ್ಲಿರುವ ವಿರಾಟ್​ ಕೊಹ್ಲಿ ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ IND vs ENG: ಸೋಲಿನ ಬೆನ್ನಲ್ಲೇ ಅಬುಧಾಬಿಗೆ ತೆರಳಿದ ಇಂಗ್ಲೆಂಡ್​ ತಂಡ; ಕಾರಣವೇನು?

2ನೇ ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ-ಅನುಷ್ಕಾ


ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಹಿಂದೆ ಸರಿಯಲು ಕಾರಣ ಏನೆಂಬುದನ್ನು ಅವರ ಗೆಳೆಯ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್​ ಅವರು ಶನಿವಾರ ಆನ್​ ಲೈನ್​ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದರು. ಕೊಹ್ಲಿ ಮತ್ತು ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿರುವುದು ಖಚಿತ ಎಂದು ಹೇಳಿದ್ದರು.

ಆನ್​ಲೈನ್​ ಸಂದರ್ಶನದಲ್ಲಿ ಮಾತನಾಡಿದ ಡಿ ವಿಲಿಯರ್ಸ್​, ‘ನನಗೆ ತಿಳಿದಿರುವಂತೆ ವಿರಾಟ್ ಕೊಹ್ಲಿ ಕುಟುಂಬದ ಜತೆ ಸಮಯ ಕಳೆಯಲು ಬಯಸಿದ್ದಾರೆ. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೊಹ್ಲಿಯ ನಿರ್ಧಾರವನ್ನು ಗೌರವಿಸಲೇ ಬೇಕು” ಎಂದು ಡಿ ವಿಲಿಯರ್ಸ್ ಹೇಳಿದ್ದರು.

ಸ್ನಾಯು ಸೆಳೆತಕ್ಕೆ ಒಳಗಾಗಿ ದ್ವಿತೀಯ ಟೆಸ್ಟ್​ಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಮೂರನೇ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದೊಮ್ಮೆ ಕೊಹ್ಲಿ, ಜಡೇಜಾ ಮತ್ತು ಶಮಿ ಸರಣಿಯಿಂದ ಹೊರಗುಳಿದರೆ ಈಗ ತಂಡದಲ್ಲಿರುವ ಆಟಗಾರರೇ ಮುಂದಿನ ಪಂದ್ಯಕ್ಕೂ ಅವಕಾಶ ಪಡೆಯಬಹುದು.

Exit mobile version