Site icon Vistara News

ಧರ್ಮಶಾಲಾ ತಲುಪಿದ ಉಭಯ ತಂಡದ ಆಟಗಾರರು; ನಾಳೆಯಿಂದ ಅಭ್ಯಾಸ

IND vs ENG

ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ಅಂತಿಮ ಟೆಸ್ಟ್​ ಪಂದ್ಯ(IND vs ENG 5th Test) ಹಿಮಾಲಯದ ತಪ್ಪಲಿನ ರಮಣೀಯ ತಾಣವಾದ ಧರ್ಮಶಾಲಾದಲ್ಲಿ(Dharamshala) ನಡೆಯಲಿದೆ. ಈ ಪಂದ್ಯ ಮಾರ್ಚ್​ 7ರಿಂದ ಆರಂಭಗೊಳ್ಳಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಕೂಡ ಭಾನುವಾರ ಧರ್ಮಶಾಲಾ ತಲುಪಿದೆ.

ದೇಶದ 28ನೇ ಟೆಸ್ಟ್‌ ಕೇಂದ್ರ

2017ರಲ್ಲಿ ಭಾರತ-ಆಸ್ಟೇಲಿಯ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಆತಿಥ್ಯ ವಹಿಸುವುದರೊಂದಿಗೆ ಧರ್ಮಶಾಲಾ ಸ್ಟ್ರೇಡಿಯಂ ನೂತನ ಟೆಸ್ಟ್‌ ಕೇಂದ್ರವಾಗಿ ಎದ್ದು ನಿಂತಿತ್ತು. ಇದು ಭಾರತದ 28ನೇ ಟೆಸ್ಟ್‌ ಕೇಂದ್ರವಾಗಿದೆ. ವಿಶ್ವದ ಅತ್ಯಂತ ಎತ್ತರದ ಕ್ರಿಕೆಟ್‌ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧರ್ಮಶಾಲಾದಲ್ಲಿ ನಡೆಯುತ್ತಿರುವ 2 ಟೆಸ್ಟ್‌ ಪಂದ್ಯ ಇದಾಗಿದೆ. ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ಕ್ರೀಡಾಂಗಣ ಅಪರಿಚಿತವೇನಲ್ಲ. ಇಲ್ಲಿ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯಗಳು ಕೂಡ ನಡೆದಿತ್ತು. ಟೆಸ್ಟ್​ ಮಾತ್ರ ಬೆರಳೆಣಿಯ ಪಂದ್ಯಗಳು ನಡೆದಿವೆ.

ಧರ್ಮಶಾಲಾ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತೆರೆದುಕೊಂಡದ್ದು 2013ರಲ್ಲಿ. ಅಂದು ಭಾರತ-ಇಂಗ್ಲೆಂಡ್‌ ನಡುವೆ ಸರಣಿಯ 5ನೇ ಹಾಗೂ ಅಂತಿಮ ಏಕದಿನ ಪಂದ್ಯ ಇಲ್ಲಿ ನಡೆದಿತ್ತು. ಇದನ್ನು ಧೋನಿ ಪಡೆ 7 ವಿಕೆಟ್‌ಗಳಿಂದ ಸೋತಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.

ಅತ್ಯಂತ ರಮಣೀಯ ಸ್ಟೇಡಿಯಂ

​ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಲ್ಯಾಂಡ್ಸ್‌ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ. ಪ್ರಕೃತಿಗೆ ತೆರೆದುಕೊಂಡಿರುವುದರಿಂದ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ. ಇಂಗ್ಲೆಂಡ್​ ತಂಡದಲ್ಲಿ ಹೆಚ್ಚು ಪೇಸ್‌ ಬೌಲರ್​ಗಳಿರುವ ಕಾರಣ ಅವರಿಗೆ ಹೆಚ್ಚಿನ ಲಾಭ ಗಳಿಸಬಹುದು.

ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಭಾರತ ತಂಡಕ್ಕೆ ಐಪಿಎಲ್​ ಟೂರ್ನಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯ ಎಂದರೂ ತಪ್ಪಾಗಲಾರದು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ನಿಟ್ಟಿನಲ್ಲಿ ನೋಡುವುದಾದರೆ ಈ ಪಂದ್ಯ ಇತ್ತಂಡಗಳಿಗೂ ಮಹತ್ವದಾಗುತ್ತದೆ. ಏಕೆಂದರೆ ಫೈನಲ್​ ಪ್ರವೇಶ ಪಡೆಯಬೇಕಾದರೆ ಅಂಕಪಟ್ಟಿಯಲ್ಲಿ ಅಂತಿಮವಾಗಿ ಮೊದಲ ಎರಡು ಸ್ಥಾನ ಪಡೆಯಬೇಕಾಗುತ್ತದೆ.​

ಸೋಮವಾರದಿಂದ ಅಭ್ಯಾಸ


ಭಾನುವಾರವೇ ಉಭಯ ತಂಡಗಳ ಆಟಗಾರರು ಧರ್ಮಶಾಲಾ ತಲುಪಿದರೂ ಕೂಡ ಒಂದು ದಿನದ ವಿಶ್ರಾಂತಿ ಪಡೆದು ಸೋಮವಾರದಿಂದ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಭಾರತ ತಂಡದ ಸ್ಪಿನ್ನರ್​ ಆರ್​. ಅಶ್ವಿನ್​ ಅವರಿಗೆ ಈ ಪಂದ್ಯ 100ನೇ ಟೆಸ್ಟ್​ ಪಂದ್ಯವಾದ್ದರಿಂದ ಅವರ ಪಾಲಿಗೆ ಸ್ಮರಣೀಯ ಪಂದ್ಯವಾಗಲಿದೆ. ಈಗಾಗಲೇ ಅವರು 500 ವಿಕೆಟ್​ಗಳ ಕ್ಲಬ್​ಗೆ ಸೇರ್ಪಡೆಗೊಂಡಿದ್ದಾರೆ.

Exit mobile version