ಹೈದರಾಬಾದ್: ರವೀಂದ್ರ ಜಡೇಜಾ(3) ಮತ್ತು ಆರ್. ಅಶ್ವಿನ್(3) ಅವರ ಸ್ಪಿನ್ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡ(IND vs ENG) ಭಾರತ ಎದುರಿನ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 246 ರನ್ಗೆ ಸರ್ವಪತನ ಕಂಡಿದೆ. ನಾಯಕ ಬೆನ್ ಸ್ಟೋಕ್ಸ್ ಬಾರಿಸಿದ ಅರ್ಧಶತಕ ಇಂಗ್ಲೆಂಡ್ ಪಾಲಿನ ಪ್ರಮುಖ ಹೈಲೆಟ್ಸ್ ಆಗಿತ್ತು.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 64.3 ಓವರ್ಗಳಲ್ಲಿ 246ರನ್ ಗಳಿಸಿ ಆಲೌಟ್ ಆಯಿತು.
ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ಜಾಕ್ ಕ್ರಾಲಿ(20) ಮತ್ತು ಬೆನ್ ಡಕೆಟ್(35) ಉತ್ತಮ ಆರಂಭ ಒದಗಿಸಿದರು. ಇನ್ನೇನು ಅಪಾಯಕಾರಿಯಾಗುವ ಹಂತದಲ್ಲಿಯೇ ಇವರ ಬ್ಯಾಟಿಂಗ್ ಅಬ್ಬರಕ್ಕೆ ಅನುಭವಿ ಅಶ್ವಿನ್ ಬ್ರೇಕ್ ಹಾಕಿದರು. ಉಭಯ ಆಟಗಾರರ ವಿಕೆಟ್ ಕಿತ್ತು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ ಬಂದ ಓಲಿ ಪೋಪ್ಗೆ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಳ್ಳಲು ಜಡೇಜಾ ಅನುವು ನೀಡಲಿಲ್ಲ. 1 ರನ್ಗೆ ಸೀಮಿತಗೊಳಿಸಿ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಇಂಗ್ಲೆಂಡ್ 60 ರನ್ಗೆ 3 ವಿಕೆಟ್ ಕಳೆದುಕೊಂಡಿತು.
Ben Stokes' enterprising knock comes to an end, drawing curtains on England's innings on Day 1 ☝
— ICC (@ICC) January 25, 2024
📝 #INDvENG: https://t.co/E53vcqjfHE | #WTC25 pic.twitter.com/vB0tHrYZ2R
ನಾಲ್ಕನೇ ವಿಕೆಟ್ಗೆ ಜತೆಯಾದ ಜಾನಿ ಬೇರ್ಸ್ಟೊ ಮತ್ತು ಅನುಭವಿ ಜೋ ರೂಟ್ ಸೇರಿಕೊಂಡು ಸಣ್ಣ ಹೋರಾಟವೊಂದನ್ನು ಜಾರಿಯಲ್ಲಿರಿಸಿ ರನ್ ಒಟ್ಟುಗೂಡಿಸಲಾರಂಭಿಸಿದರು. ಇನ್ನೇನು ರೂಟ್ ಕ್ರೀಸ್ನಲ್ಲಿ ನೆಲೆಯಾಗುತ್ತಾರೆ ಎನ್ನುವಷ್ಟರಲ್ಲಿ ಜಡೇಜಾ ಇವರಿಗೆ ಪೆವಿಲಿಯನ್ ದಾರಿ ತೋರಿಸಿದರು. ರೂಟ್ 29 ರನ್ ಬಾರಿಸಿದರು. ಬೇರ್ ಸ್ಟೋ 37 ರನ್ ಗಳಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಸ್ಟೋಕ್ಸ್ ಏಕಾಂಗಿ ಹೋರಾಟ
ಕುಸಿದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದದ್ದು ನಾಯಕ ಬೆನ್ ಸ್ಟೋಕ್ಸ್. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಅವರು ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿದರು. ಕೊನೆಯ ತನಕ ಬ್ಯಾಟಿಂಗ್ ನಡೆಸಿದ ಅವರು 70 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇವರ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ಬ್ಯಾಟಿಂಗ್ ಇನಿಂಗ್ಸ್ ಕೂಡ ಅಂತ್ಯಗೊಂಡಿತು. ಸ್ಟೋಕ್ಸ್ 88 ಎಸೆತ ಎದುರಿಸಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 70 ರನ್ ಬಾರಿಸಿದರು. ಭಾರತ ಪರ ಜಡೇಜಾ ಮತ್ತು ಅಶ್ವಿನ್ ತಲಾ ಮೂರು ವಿಕೆಟ್ ಉರುಳಿಸಿದರು.
ಗುರಿ ಬೆನ್ನಟ್ಟಿರುವ ಭಾರತ ಒಂದು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ನಡೆಸುತ್ತದೆ. ರೋಹಿತ್ 24 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು.