Site icon Vistara News

IND vs ENG: ಮತ್ತೆ ತಂಡ ಸೇರಿದ ಅಶ್ವಿನ್; ನಾಲ್ಕನೇ ದಿನದಾಟಕ್ಕೆ ಲಭ್ಯ

r ashwin

ರಾಜ್​ಕೋಟ್​: ತಾಯಿಯ ಅನಾರೋಗ್ಯದಿಂದ ದಿಢೀರನೇ ಚೆನ್ನೈಗೆ ಮರಳಿದ್ದ ಆರ್‌. ಅಶ್ವಿ‌ನ್‌(R Ashwin) ಮತ್ತೆ ಭಾರತ ತಂಡ ಸೇರಿದ್ದಾರೆ. ಕೌಟುಂಬಿಕ ತುರ್ತು ಕಾರಣಗಳಿಂದ ಅಶ್ವಿನ್ ಇಂಗ್ಲೆಂಡ್​(IND vs ENG) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್​ನ(India vs England 3rd Test) ಮೂರನೇ ದಿನದಾಟವನ್ನು ತಪ್ಪಿಸಿಕೊಂಡಿದ್ದರು.

ಇದೀಗ ನಾಲ್ಕನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ಅಶ್ವಿನ್ ಮತ್ತು ಅವರ ಕುಟುಂಬದ ಗೌಪ್ಯತೆ ಕಾಪಾಡಿಕೊಳ್ಳಲು ವಿನಂತಿಸಿದೆ. ಮೂರನೇ ದಿನದಾಟದಲ್ಲಿ ಅಶ್ವಿನ್​ ಬದಲು ದೇವದತ್ತ ಪಡಿಕ್ಕಲ್​ ಬದಲಿ ಫೀಲ್ಡರ್​ ಆಗಿ ಆಡಿದ್ದರು. ಅಶ್ವಿನ್​ ಆಗಮನದಿಂದ ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ. ವರದಿಯೊಂದರ ಪ್ರಕಾರ ಅಶ್ವಿನ್​ ಉಳಿದಿರುವ 2 ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಈ ವರದಿ ಹುಸಿಯಾಗಿದೆ.

ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಅಶ್ವಿನ್​ ಅವರು ಜಾಕ್​ ಕ್ರಾಲಿ ವಿಕೆಟ್​ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 500(R Ashwin historic 500th Test wicket) ವಿಕೆಟ್​ಗಳ ಮೈಲುಗಲ್ಲು ತಲುಪಿದ್ದರು. ಈ ಸಾಧನೆ ಮಾಡಿದ ಅದೇ ದಿನ ಕೌಟುಂಬಿಕ ತುರ್ತು ಕಾರಣ ನೀಡಿ ದಿಢೀರ್​ ಪಂದ್ಯದಿಂದ ಹಿಂದೆ ಸರಿದು ತವರಿಗೆ ಆಗಮಿಸಿದ್ದರು. ಇದೀಗ ತಂಡ ಸೇರಿದ್ದಾರೆ. ಸಸದ್ಯ ಭಾರತ 500 ರನ್​ಗಳ ಲೀಡ್​ ಗಡಿ ದಾಡುವ ಹಂತದಲ್ಲಿದೆ. ಶತಕ ವೀರ ಜೈಸ್ವಾಲ್​ ದ್ವಿಶತಕ ಬಾರಿಸುವ ಹೊಸ್ತಿಲಲ್ಲಿದ್ದಾರೆ. ಬಿರುಸಿನ ಬ್ಯಾಟಿಂಗ್​ ಮೂಲಕ ಸಿಕ್ಸರ್​ ಮತ್ತು ಬೌಂಡರಿಗಳ ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ.

ಇದನ್ನೂ ಓದಿ Sachin Tendulkar: ಪುಲ್ವಾಮಾದ ಬ್ಯಾಟ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ ತೆಂಡೂಲ್ಕರ್

ಅಶ್ವಿನ್​ ಅವರು 500 ವಿಕೆಟ್​ ಕಿತ್ತ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದಿದ್ದರು. ಅನಿಲ್​ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​. ಅನಿಲ್ ಕುಂಬ್ಳೆ ಟೆಸ್ಟ್​ನಲ್ಲಿ 619 ವಿಕೆಟ್ ಪಡೆದಿದ್ದಾರೆ. ಪ್ರಸಕ್ತ ಕ್ರಿಕೆಟ್​ ಆಡುತ್ತಿರುವ ಬೌಲರ್​ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್​ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್​ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ನ ಜೇಮ್ಸ್​ ಆ್ಯಂಡರ್ಸನ್​(696*) ಮತ್ತು ಆಸ್ಟ್ರೇಲಿಯಾದ ನಥಾನ್​ ಲಿಯೋನ್​(512*) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

ಮೋದಿಯಿಂದ ಮೆಚ್ಚುಗೆ


ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಿತ್ತ ಸಾಧನೆ ಮಾಡಿದ ಟೀಮ್​ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್(R Ashwin)​ ಅವರಿಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಮೆಚ್ಚುಗೆ ಮತ್ತು ಅಭಿನಂಧನೆ ಸಲ್ಲಿಸಿದ್ದರು. 

ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ‘500 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಅಸಾಮಾನ್ಯ ಸಾಧನೆಗಾಗಿ ರವಿಚಂದ್ರನ್ ಅಶ್ವಿನ್ ಅವರಿಗೆ ಅಭಿನಂದನೆಗಳು. ಅವರ ಪ್ರಯಾಣ ಮತ್ತು ಸಾಧನೆಗಳು ಅವರ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಸಾಧನೆಗಳ ಶಿಖರಗಳನ್ನು ಏರುವಂತೆ ಆಗಲಿ. ಅವರಿಗೆ ನನ್ನ ಶುಭಾಶಯಗಳು’ ಎಂದು ಮೋದಿ ಹಾರೈಸಿದ್ದರು.

Exit mobile version