ಲಕ್ನೋ: ಗಂಭೀರ ಸ್ವರೂಪದ ಬೆನ್ನು ನೋವಿನ ಸಮಸ್ಯೆಯಿಂದಾಗಿ 11 ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದರು. ಇದಾದ ಬಳಿಕ ಏಷ್ಯಾ ಕಪ್ನಲ್ಲಿ ಆಡಿ ವಿಶ್ವಕಪ್ ಟೂರ್ನಿಗೆ(ICC World Cup) ಆಯ್ಕೆಯಾಗಿದ್ದರು. ಸದ್ಯ ಅವರು ವಿಶ್ವಕಪ್ನಲ್ಲಿ ತಮ್ಮ ಹಳೆಯ ಶೈಲಿಯಲ್ಲೇ ಯಾರ್ಕರ್ ಎಸೆತಗಳ ಮೂಲಕ ವಿಕೆಟ್ ಕೀಳುತ್ತಿದ್ದಾರೆ. ಅವರ ಈ ಪ್ರದರ್ಶನಕ್ಕೆ ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಮ್(Wasim Akram) ಮನಸೋತ್ತಿದ್ದಾರೆ.
ಇಂಗ್ಲೆಂಡ್(IND vs ENG) ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಘಾತಕ ಬೌಲಿಂಗ್ ದಾಳಿಯ ಮೂಲಕ ಮೂರು ವಿಕೆಟ್ ಕೆಡವಿದರು. ಅವರ ಈ ಪ್ರದರ್ಶನದ ಬಗ್ಗೆ ಮಾತನಾಡಿದ ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಮ್ ಅವರು, ಪ್ರಸಕ್ತ ಕ್ರಿಕೆಟ್ ಲೋಕದಲ್ಲಿ ಬುಮ್ರಾ ಅತ್ಯುತ್ತಮ ಬೌಲರ್ ಎಂದಿದ್ದಾರೆ.
“ಬುಮ್ರಾ ಬಳಿ ಬೌಲಿಂಗ್ಗೆ ಬೇಕಾದ ನಿಯಂತ್ರಣ, ವೇಗ, ಎಲ್ಲ ರೀತಿಯ ಕೌಶಲ್ಯವಿದೆ. ಅದರಲ್ಲೂ ಅವರು ಹೊಸ ಚೆಂಡಿನಲ್ಲಿ ತೋರುವ ಚಮಾತ್ಕಾರ ನನ್ನಿಂದ ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದು ಬುಮ್ರಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನಾನು ಕ್ರಿಕೆಟ್ ಆಡುತ್ತಿದ್ದ ವೇಳೆ ಹೊಸ ಚೆಂಡಿನೊಂದಿಗೆ ಬಲಗೈ ಬ್ಯಾಟರ್‌ಗಳಿಗೆ ಈ ರೀತಿಯ ಪರಿಪೂರ್ಣ ಔಟ್ ಸ್ವಿಂಗ್ ಬೌಲ್ ಎಸೆಯಲು ಸಾಧ್ಯವಾಗುತ್ತಿರಲಿಲ್ಲ. ಎಷ್ಟೇ ಪ್ರಯತ್ನಿಸಿದರೂ ನನಗೆ ಚೆಂಡನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹೊಸ ಚೆಂಡಿನಲ್ಲಿ ಬುಮ್ರಾ ಉತ್ತಮ ಹಿಡಿತ ಸಾಧಿಸಿದ್ದಾರೆ” ಎಂದು ಅಕ್ರಮ್ ಬುಮ್ರಾ ಅವರನ್ನು ಹಾಡಿ ಹೊಗಳಿದ್ದಾರೆ.
ಬುಮ್ರಾ ಬೌಲಿಂಗ್ ನೋಡಿ ಕಲಿಯಿರಿ; ಪಾಕ್ ಆಟಗಾರರಿಗೆ ಸಲಹೆ
ಕೆಲ ದಿನಗಳ ಹಿಂದೆ ಪಾಕಿಸ್ತಾನದ ದಂತಕಥೆ ವಕಾರ್ ಯೂನಿಸ್ ಅವರು ತಮ್ಮ ದೇಶದ ಸ್ಟ್ರೈಕ್ ಬೌಲರ್ ಶಾಹೀನ್ ಶಾ ಅಫ್ರಿದಿ ಮತ್ತು ಇತರ ವೇಗಿಗಳಿಗೆ ಸಲಹೆಯೊಂದನ್ನು ನೀಡಿದ್ದರು. ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಕೌಶಲವನ್ನು ನೋಡಿ ಕಲಿಯಿರಿ ಎಂದು ಹೇಳಿದ್ದರು.
ಕುಂಬ್ಳೆ ದಾಖಲೆ ಪತನ
ಬುಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಮೂರು ವಿಕೆಟ್ ಕೀಳುವ ಮೂಲಕ ಭಾರತ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕುಂಬ್ಳೆ 31 ವಿಕೆಟ್ ಪಡೆದಿದ್ದಾರೆ. ಇದೀಗ ಬುಮ್ರಾ 15 ಪಂದ್ಯಗಳನ್ನು ಆಡಿ 32 ವಿಕೆಟ್ ಪಡೆದು ಕುಂಬ್ಳೆ ದಾಖಲೆಯನ್ನು ಮುರಿದರು. ಬ್ಯಾಟಿಂಗ್ನಲ್ಲಿಯೂ 16 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡು ನೀಡಿದ್ದರು.
ಭಾರತ ಪರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಜಹೀರ್ ಖಾನ್ ಹೆಸರಿನಲ್ಲಿದೆ. ಅವರು 2003-2011 ವರೆಗೆ ವಿಶ್ವಕಪ್ ಆಡಿ 44 ವಿಕೆಟ್ಗಳನ್ನು ಕಿತ್ತಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಅವರು 1992-2003 ಆಡಿ 44 ವಿಕೆಟ್ ಪಡೆದಿದ್ದಾರೆ. ಸದ್ಯ 13 ಪಂದ್ಯ ಆಡಿರುವ ಶಮಿ ಅವರು 40* ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯಗಳಲ್ಲಿ 5 ವಿಕೆಟ್ ಪಡೆದರೆ ಶ್ರೀನಾಥ್ ಮತ್ತು ಜಹೀರ್ ಖಾನ್ ಅವರ ದಾಖಲೆಯ ಮುರಿಯುವ ಅವಕಾಶವಿದೆ.
ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾಕ್ಕೇರಿದ ಭಾರತ
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ರೋಹಿತ್ ಮತ್ತು ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್ಗಳಲ್ಲಿ 129 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್ ದಾಳಿ ನಡೆಸಿ 22 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರು. ಭಾರತ ಭರ್ತಿ 100ರನ್ ಅಂತರದ ಗೆಲುವು ಸಾಧಿಸಿತು.