Site icon Vistara News

IND vs ENG: ಪಂದ್ಯ ಗೆದ್ದರೂ ಬೇಸರ ವ್ಯಕ್ತಪಡಿಸಿದ ನಾಯಕ ರೋಹಿತ್​ ಶರ್ಮ

rohit sharma

ಲಕ್ನೋ: ಇಂಗ್ಲೆಂಡ್(IND vs ENG)​ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಬ್ಯಾಟರ್​ಗಳು ಈ ಪಂದ್ಯದಲ್ಲಿ 30 ರನ್​ಗಳ ಕೊರತೆ ಅನುಭವಿಸಿದ್ದಾರೆ ಎಂದು ಹೇಳಿದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್​, “ಇದೊಂದು ಅದ್ಭುತ ಪಂದ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್​ಗಳು 30 ರನ್​ಗಳ ಕೊರತೆ ಅನುಭವಿಸಿದ್ದು ಬೇಸರ ತಂದಿದೆ. ನಿಜಕ್ಕೂ ಈ ಗೆಲುವು ಬೌಲರ್​ಗಳಿಗೆ ಸಲ್ಲಬೇಕು. ಸಾಧಾರಣ ಮೊತ್ತವನ್ನು ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ರಕ್ಷಿಸಿಕೊಂಡಿದ್ದು ಮೆಚ್ಚಲೇ ಬೇಕು. ಈ ಪಂದ್ಯದ ಮೂಲಕ ನಮ್ಮ ತಂಡದ ಬೌಲಿಂಗ್​ ಪ್ರದರ್ಶನ ಏನೆಂಬುದು ತಿಳಿದುಬಂದಿದೆ” ಎಂದು ಹೇಳಿದರು.

“ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯದ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ಮಾಡುವಲ್ಲಿ ನಮ್ಮ ತಂಡದ ಬೌಲರ್​ಗಳ ಯಶಸ್ಸು ಸಾಧಿಸಿದರು. ಇಬ್ಬನಿಯನ್ನೂ ಲೆಕ್ಕಿಸದೆ ಲೈನ್​ ಅಂಡ್​​​ ಲೆಂತ್​ನಲ್ಲಿ​ ಬೌಲಿಂಗ್​ ಮಾಡಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟರು” ಎಂದು ಬೌಲರ್​ಗಳ ಪ್ರದರ್ಶನವನ್ನು ಶ್ಲಾಘಿಸಿದರು.

ಕಾಲೆಂಡರ್​ ವರ್ಷದಲ್ಲಿ ಸಾವಿರ ರನ್​

100ನೇ ನಾಯಕತ್ವದಲ್ಲಿ ಆಡಲಿಳಿದ ರೋಹಿತ್​ ಶರ್ಮ ಅವರು 87 ರನ್ ಬಾರಿಸಿ ಮಿಂಚಿದರು. ಅವರ ಈ ಬ್ಯಾಟಿಂಗ್​ ಸಾಹಸದಿಂದ ಭಾರತ ಸ್ಪರ್ಧಾತ್ಮಕ ಮೊತ್ತ ಪೇರಿಸುವಂತಾಯಿತು. ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ರೋಹಿತ್​ ಅವರು 33 ರನ್​ ಗಳಿಸಿದ ವೇಳೆ ಎಲ್​ಬಿಡಬ್ಲ್ಯುನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅವರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್​ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ನಿದರ್ಶನ. 2013, 2017, 2018 ಮತ್ತು 2019 ರಲ್ಲಿ ಈ ಸಾಧನೆ ಮಾಡಿದ್ದರು.

ನಾಯಕನಾಗಿ ನೂರನೇ ಪಂದ್ಯ

ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲೊಂದನ್ನು ನಿರ್ಮಿಸಿದರು. ನಾಯಕನಾಗಿ 100ನೇ ಪಂದ್ಯವನ್ನು ಮುನ್ನಡೆಸಿದ ದಾಖಲೆ ಬರೆದರು. ಈ ಮೂಲಕ 100ನೇ ಪಂದ್ಯವನ್ನು ಮುನ್ನಡೆಸಿದ 7ನೇ ಭಾರತೀಯ ನಾಯಕ ಎನಿಸಿಕೊಂಡರು. ಅಲ್ಲದೆ ಈ ಸ್ಮರಣೀಯ ಪಂದ್ಯವನ್ನು ಗೆಲ್ಲುವ ಮೂಲಕ ಡಬಲ್​ ಸಂಭ್ರಮ ಆಚರಿಸಿದರು. ಅತಿ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ವಿಶ್ವಕಪ್​ ವಿಜೇತ ಮಹೇಂದ್ರ ಸಿಂಗ್​ ಧೋನಿ ಅವರ ಹೆಸರಿನಲ್ಲಿದೆ.

ಧೋನಿ ಅವರು 332 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆ ಬಳಿಕದ ಸ್ಥಾನ ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಇದನ್ನೂ ಓದಿ ICC World Cup 2023: ವಿಶ್ವಕಪ್​ನಲ್ಲಿ ಆಸೀಸ್​ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್​

ಪಂದ್ಯ ಗೆದ್ದ ಭಾರತ

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ರೋಹಿತ್​ ಮತ್ತು ಸೂರ್ಯಕುಮಾರ್​ ಅವರ ಬ್ಯಾಟಿಂಗ್​ ಸಾಹಸದಿಂದ ನಿಗದಿತ 50 ಓವರ್​ಗಳಲ್ಲಿ​ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್​ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್​ಗಳಲ್ಲಿ 129 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್​ ದಾಳಿ ನಡೆಸಿ 22 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್​ಪ್ರೀತ್​ ಬುಮ್ರಾ ಮೂರು ವಿಕೆಟ್​ ಪಡೆದರು. ಭಾರತ ಭರ್ತಿ 100ರನ್​ ಅಂತರದ ಗೆಲುವು ಸಾಧಿಸಿತು.

Exit mobile version