Site icon Vistara News

IND vs ENG: ಟೆಸ್ಟ್ ಸರಣಿಗಾಗಿ ಬಾಣಸಿಗನೊಂದಿಗೆ ಭಾರತಕ್ಕೆ ಬಂದಿಳಿದ ಇಂಗ್ಲೆಂಡ್​ ತಂಡ

england team in hyderabad

ಹೈದರಾಬಾದ್​: ಭಾರತ(IND vs ENG) ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಪ್ರವಾಸಿ(England tour of India, 2024) ಇಂಗ್ಲೆಂಡ್​ ತಂಡ ಇಂದು(ಸೋಮವಾರ) ಭಾರತಕ್ಕೆ ಬಂದಿಳಿದಿದೆ. ಇತ್ತಂಡಗಳ ಮೊದಲ ಪಂದ್ಯ ಜನವರಿ 25ರಿಂದ(India vs England, 1st Test) ಆರಂಭಗೊಳ್ಳಲಿದೆ. ಈ ಪಂದ್ಯ ಹೈದರಾಬಾದ್​ನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಇಂಗ್ಲೆಂಡ್​ ತಂಡದ ಆಟಗಾರರು ಲಂಡನ್​ನಿಂದ ಹೊರಟು ಹೈದರಾಬಾದ್​ ತಲುಪಿದ ವಿಡಿಯೊವನ್ನು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ(ಇಸಿಬಿ) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. “ಹಲೋ ಮುತ್ತಿನ ನಗರಿ ಹೈದರಾಬಾದ್‍” ಎಂದು ಬರೆದುಕೊಂಡಿದೆ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(Virat Kohli) ವೈಯಕ್ತಿಕ ಕಾರಣ ನೀಡಿ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. 

ಹೈದರಾಬಾದ್​ಗೆ ಬಂದಿಳಿದಿರುವ ಬೆನ್​ ಸ್ಟೋಕ್ಸ್​ ಬಳಗ ಮಂಗಳವಾರದಿಂದ ಅಭ್ಯಾಸ ಆರಂಭಿಸಲಿದೆ ಎಂದು ತಂಡದ ಕೋಚ್​ ಬ್ರೆಂಡನ್​ ಮೆಕಲಮ್​ ತಿಳಿಸಿದ್ದಾರೆ. ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

ಇದನ್ನೂ ಓದಿ IND vs ENG: ಮೊದಲ 2 ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿದ ವಿರಾಟ್​ ಕೊಹ್ಲಿ

ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್​ ತಂಡ ಟೆಸ್ಟ್​ನಲ್ಲಿ ಸುಧಾರಿತ ಪ್ರದರ್ಶನವನ್ನು ತೋರುತ್ತಿದ್ದರೂ 2012 ರಿಂದ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಈ ಬಾರಿಯಾದರೂ ಗೆದ್ದಿತೇ? ಎನ್ನುವುದು ಈ ಸರಣಿಯ ಕುತೂಹಲ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್​ ಒಂದು ಟೆಸ್ಟ್​ ಆಡಿ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಭಾರತ ತಂಡ ಇಲ್ಲಿ ಅಜೇಯ ದಾಖಲೆ ಹೊಂದಿದೆ. ಹೀಗಾಗಿ ಇತ್ತಂಡಗಳ ಮೊದಲ ಟೆಸ್ಟ್​ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.

ಬಾಣಸಿಗನನ್ನೂ ಕರೆತಂದ ಇಂಗ್ಲೆಂಡ್


5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಇಂಗ್ಲೆಂಡ್​ ತಂಡ(IND vs ENG) ಭಾರತಕ್ಕೆ ಬಂದ ವೇಳೆ ಜನಪ್ರಿಯ ಬಾಣಸಿಗ ಒಮರ್​ ಮೆಜಿಯಾನ್ ಅವರನ್ನು ಕೂಡ ಕರೆತಂದಿದೆ. 7 ವಾರಗಳ ಪ್ರವಾಸದ ವೇಳೆ ಆಟಗಾರರು, ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಈ ಕ್ರಮ ಕೈಗೊಂಡಿದೆ.

ಭಾರತದಲ್ಲಿನ ಹೋಟೆಲ್​ ವ್ಯವಸ್ಥೆಗಳ ನೈರ್ಮಲ್ಯದ ಬಗ್ಗೆ ಇಸಿಬಿಗೆ ಯಾವುದೇ ತಕರಾರು ಇಲ್ಲ. ಬದಲಾಗಿ, ತಂಡದ ಎಲ್ಲ ಆಟಗಾರರು ಪೌಷ್ಠಿಕ ಮತ್ತು ತಮ್ಮ ನೆಚ್ಚಿನ ಆಹಾರಗಳನ್ನೇ ಸೇವಿಸುವಂತಾಗಲು ಈ ಕ್ರಮ ಕೈಗೊಂಡಿರುವುದಾಗಿ ಇಸಿಬಿ ಸ್ಪಷ್ಟಪಡಿಸಿದೆ. ಸುಮಾರು ಏಳು ವಾರಗಳ ಕಾಲ ಇಂಗ್ಲೆಂಡ್​ ಆಟಗಾರರು ಭಾರತದಲ್ಲಿರುವ ಕಾರಣದಿಂದ ಅವರಿಗೆ ಇಲ್ಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಕಷ್ಟವಾದೀತು ಎನ್ನುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Exit mobile version