ರಾಜ್‌ಕೋಟ್: ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ(IND vs ENG) ಮುಕ್ತಾಯಕಂಡ ಬೆನ್ನಲ್ಲೇ ಅಬುಧಾಬಿಗೆ ತೆರಳಿ ಒಂದು ವಾರ ವಿಶ್ರಾಂತಿ ಪಡೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಮೂರನೇ ಟೆಸ್ಟ್ ಪಂದ್ಯವನ್ನಾಡಲು ರಾಜ್‌ಕೋಟ್(Rajkot)ಗೆ ಬಂದಿಳಿದಿದೆ. ಸೋಮವಾರ ತಡ ರಾತ್ರಿ ಇಂಗ್ಲೆಂಡ್ ಆಟಗಾರರು ಭಾರತಕ್ಕೆ ಬಂದಿಳಿದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್(India vs England 3rd Test) ಗುರುವಾರ(ಫೆ.15)ದಿಂದ ಆರಂಭಗೊಳ್ಳಲಿದೆ. ಸದ್ಯ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ವಿಶಾಖಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 106 ರನ್‌ಗಳ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಹತ್ತು ದಿನಗಳ ವಿಶ್ರಾಂತಿಗಾಗಿ ಅಬುಧಾಬಿಗೆ ತೆರಳಿದ್ದರು. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್ ಅಬುಧಾಬಿಯಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು. ಇಂದಿನಿಂದ (ಮಂಗಳವಾರ) ಎಸ್‌ಸಿಎ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಆಟಗಾರು ಅಭ್ಯಾಸ ಪ್ರಾರಂಭಿಸಲಿದ್ದಾರೆ.
ಮೊಣಕಾಲು ಗಾಯಕ್ಕೆ ತುತ್ತಾದ ಜಾಕ್ ಲೀಚ್ ಅವರು ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದು ಆಂಗ್ಲರಿಗೆ ಕೊಂಚ ಹಿನ್ನಡೆ ಉಂಟುಮಾಡಿದೆ. ಲೀಚ್ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರನನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿಲ್ಲ. ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲಿ, ರೆಹಾನ್ ಅಹ್ಮದ್ ಮತ್ತು ಶೋಯೆಬ್ ಬಶೀರ್ ತಂಡದಲ್ಲಿರುವ ಸ್ಪಿನ್ನರ್ಗಳಾಗಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡ
ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್, ಓಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಗಸ್ ಅಟ್ಕಿನ್ಸನ್.
ಇದನ್ನೂ ಓದಿ Rajkot Stadium: ರಾಜ್‌ಕೋಟ್ ಸ್ಟೇಡಿಯಂಗೆ ನಾಳೆ ಮರುನಾಮಕರಣ
ಭಾರತಕ್ಕೆ ಗಾಯದ ಚಿಂತೆ
ಆತಿಥೇಯ ಭಾರತ ತಂಡಕ್ಕೆ ಗಾಯದ ಚಿಂತೆ ಕಾಡಿದೆ. ಶ್ರೇಯಸ್ ಅಯ್ಯರ್ ಗಾಯದಿಂದ ಹೊರಬಿದ್ದ ಬೆನ್ನಲ್ಲೇ ತಂಡದ ಮತೋರ್ವ ಅನುಭವಿ ಆಟಗಾರ ಕೆ.ಎಲ್ ರಾಹುಲ್ ಕೂಡ ಗಾಯದಿಂದಾಗಿ ಮೂರನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಎಡಗೈ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ರವೀಂದ್ರ ಜಡೇಜಾ ಚೇತರಿಕೆ ಕಂಡಿದ್ದರೂ ಆಡುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣ ನೀಡಿ ಸಂಪೂರ್ಣವಾಗಿ ಸರಣಿಯಿಂದಲೇ ಹೊರಗುಳಿದಿದ್ದಾರೆ. ಒಟ್ಟಾರೆ ಬೆರಳೆಣಿಕೆಯ ಅನುಭವಿ ಆಟಗಾರರ ಲಭ್ಯತೆಯಲ್ಲಿ ಭಾರತ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಭಾರತ ರಾಜ್ಕೋಟ್ನಲ್ಲಿ ಇದುವರೆಗೆ ಆಡಿದ ಟೆಸ್ಟ್ನಲ್ಲಿ ಸೋಲು ಕಾಣದೆ ಅಜೇಯ ದಾಖಲೆ ಹೊಂದಿದೆ. ಈ ಬಾರಿಯೂ ಈ ದಾಖಲೆಯನ್ನು ಮುಂದುವರಿಸಲಿದೆಯಾ ಎಂದು ಕಾದು ನೋಡಬೇಕಿದೆ.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.