ಅಡಿಲೇಡ್: ಭಾರತ ಕ್ರಿಕೆಟ್ ತಂಡ ಮಹತ್ವದ ಟೂರ್ನಿಯಲ್ಲಿ ಸೋಲು ಕಂಡಾಗಲೆಲ್ಲಾ ಭಾರತೀಯರಿಗೆ ಮೊದಲು ನೆನಪಿಗೆ ಬರುವುದು ಹಾಕಿ ಕ್ರೀಡೆ. ಇದೀಗ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲಿನ ಬಳಿಕವೂ ಕ್ರಿಕೆಟ್ ನಮ್ಮ ಕ್ರೀಡೆಯಲ್ಲ “ಹಾಕಿ ನಮ್ಮ ದೇಶದ ಕ್ರೀಡೆ” ಎನ್ನುವ ಟ್ರೆಂಡ್ ಭಾರತದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಗುರುವಾರದ ದ್ವಿತೀಯ ಸೆಮಿಫೈನಲ್ ಮುಖಾಮುಖಿಯಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ಗೆ 168 ರನ್ ಗಳಿಸಿದರೆ ಇಂಗ್ಲೆಂಡ್ 16 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು.
ಭಾರತ ತಂಡದ ಈ ಸೋಲಿನ ಬಳಿಕ ಸಿಟ್ಟಾದ ಭಾರತೀಯರು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ, ಈ ಕ್ರೀಡೆಯನ್ನು ಎಲ್ಲರು ಬೆಂಬಲಿಸೋಣ ಎನ್ನುವ ಮೂಲಕ ಟ್ವಿಟರ್ನಲ್ಲಿ ಟೀಮ್ ಇಂಡಿಯಾದ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕ್ರಿಕೆಟಿಗರಿಗೆ ರಾಜ ಆತಿಥ್ಯ ನೀಡಿದ್ದೇ ಸೋಲಿಗೆ ಕಾರಣ. ಹಾಕಿ, ಅಥ್ಲೆಟಿಕ್ಸ್ ಕ್ರೀಡೆಗೆ ಈ ರೀತಿಯ ಸೌಲಭ್ಯ ನೀಡದಿದ್ದರೂ ಅವರ ಪ್ರದರ್ಶನ ಶ್ರೇಷ್ಠ ಮಟ್ಟದಿಂದ ಕೂಡಿರುತ್ತದೆ. ಆದರೆ ಎಲ್ಲ ಸೌಲಭ್ಯ ನೀಡಿದರೂ ಅದನ್ನೂ ಸರಿಯಾಗಿ ಬಳಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ ಎಂದು ಕೆಲ ಅಭಿಮಾನಿಗಳು ಖಾರವಾಗಿಯೇ ಬಿಸಿಸಿಐ ಮತ್ತು ರೋಹಿತ್ ಪಡೆಯನ್ನು ಟೀಕಿಸಿದ್ದಾರೆ.
ಬಾಯ್ಕಾಟ್ ಐಪಿಎಲ್
ಭಾರತ ತಂಡ ಈ ಸೋಲಿನ ಬಳಿಕ ಟ್ವಿಟರ್ನಲ್ಲಿ ಬಾಯ್ಕಾಟ್ ಐಪಿಎಲ್ ಎಂಬ ಕೂಗು ಕೇಳಿಬಂದಿದೆ. ಮೂರು ತಿಂಗಳು ನಡೆಯುವ ಐಪಿಎಲ್ ಕೂಟದಿಂದಲೇ ಭಾರತ ಕ್ರಿಕೆಟ್ ತಂಡದ ಆಟಗಾರರು ಫಿಟ್ನೆಸ್ ಕಳೆದುಕೊಳ್ಳಲು ಪ್ರಮುಖ ಕಾರಣ. ಇದೇ ಕಾರಣದಿಂದ ಭಾರತ ತಂಡ ಪ್ರಮುಖ ಟೂರ್ನಿಗಳಲ್ಲಿ ಸೋಲು ಕಾಣುತ್ತಿರುವುದು ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಮುಖ ಕ್ರಿಕೆಟ್ ಟೂರ್ನಿಗಿಂತ ಐಪಿಎಲ್ಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಬಿಸಿಸಿಐ ವಿರುದ್ಧ ಬಾಯ್ಕಾಟ್ ಐಪಿಎಲ್ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ | IND VS ENG | ಸೆಮಿಫೈನಲ್ ಸೋಲಿನಲ್ಲೂ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ; ಏನದು?