ಹೈದರಾಬಾದ್: ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸ್ಪಿನ್‌ಗೆ ಒಲವು ತೋರುವ ನಿರೀಕ್ಷೆಯಿದೆ. ಭಾರತದ ಇಬ್ಬರು ಅಗ್ರ ದರ್ಜೆಯ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ. ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಇಂಗ್ಲೆಂಡ್ ಕ್ರಿಕೆಟಿಗರು ಸ್ಪಿನ್ ಟೆಸ್ಟ್ ಎದುರಿಸಬೇಕಿದೆ ಎಂದಿದ್ದರು. ಈ ಟ್ರ್ಯಾಕ್ ಬ್ಯಾಟಿಂಗ್ ತಿರುವು ಪಡೆಯಲಿದೆ ಎಂಬುದನ್ನು ಖಚಿತವಾಗಿ ಹೇಳಲಾಗದು. ಆದರೆ, ಪಂದ್ಯ ಮುಂದುವರಿದಂತೆಲ್ಲ ಪಿಚ್ ಸ್ಪಿನ್ನಿಗೆ ನೆರವು ನೀಡುವ ಸಾಧ್ಯತೆ ಮಾತ್ರ ಅಧಿಕವಾಗಿದೆ.
ಸ್ಪಿನ್ ಸ್ನೇಹಿ ಪರಿಸ್ಥಿತಿಗಳನ್ನು ಪರಿಗಣಿಸಿ, ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲು ಒಲವು ತೋರಬಹುದು. ಏಕೆಂದರೆ ಇತ್ತೀಚೆಗೆ ಇಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಗೆದ್ದು ಬೀಗಿದೆ.
ಟೆಸ್ಟ್ ರೆಕಾರ್ಡ್ ಹೇಗಿದೆ?
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ ಐದು ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮತ್ತು ಬೌಲಿಂಗ್ ನಡೆಸಿದ ತಂಡಗಳು ತಲಾ 2 ಬಾರಿ ಗೆದ್ದಿವೆ. 404 ರನ್ ಮೊದಲ ಇನಿಂಗ್ಸ್ನ ಸರಾಸರಿ ಮೊತ್ತವಾಗಿದೆ. ದ್ವಿತೀಯ ಇನಿಂಗ್ಸ್ನ ಸರಾಸರಿ ಮೊತ್ತ 377 ರನ್. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 687/6. ಇದು ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು.
ಹವಾಮಾನ ವರದಿ
ಹೈದರಾಬಾದ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆಯ ಹಾಗೂ ಹವಾಮಾನ ವೈಪರೀತ್ಯದ ಸಮಸ್ಯೆ ಇಲ್ಲ. 5 ದಿನಗಳು ಕೂಡ ಪಂದ್ಯಕ್ಕೆ ಸೂಕ್ತವಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಬಿಸಿಲಿನ ತಾಪ ಕೊಂಚ ಅಧಿಕವಾಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ Ind vs Eng : ಭಾರತವನ್ನು ಸೋಲಿಸಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವೇ ಇಲ್ಲ ಎಂದ ಆರ್ಸಿಬಿ ಕೋಚ್
ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯಗಳ ಪೈಕಿ, ಇಂಗ್ಲೆಂಡ್ ತನ್ನ ತವರು ನೆಲದಲ್ಲಿ 36 ಪಂದ್ಯಗಳಲ್ಲಿ ಮತ್ತು ಭಾರತದಲ್ಲಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತವು ತವರಿನ ಟೆಸ್ಟ್‌ಗಳಲ್ಲಿ 22 ಬಾರಿ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ಗಳಲ್ಲಿ ಒಂಬತ್ತು ಬಾರಿ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡಗಳು
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್.