Site icon Vistara News

IND vs ENG: ಜುರೇಲ್​-ಅಶ್ವಿನ್​ ಉತ್ತಮ ಜತೆಯಾಟ; 445 ರನ್​ ಬಾರಿಸಿದ ಭಾರತ

ರಾಜ್​ಕೋಟ್​: ಇಂಗ್ಲೆಂಡ್​ ವಿರುದ್ಧದ ಮೂರನೇ(IND vs ENG) ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ಆತಿಥೇಯ ಭಾರತ 445 ರನ್​ಗೆ ಆಲೌಟ್​ ಆಗಿದೆ. ಪದಾರ್ಪಣ ಪಂದ್ಯವನ್ನಾಡಿದ ಧೃವ್​ ಜುರೇಲ್​(46), ಆರ್​. ಅಶ್ವಿನ್​ (37) ಮತ್ತು ಜಸ್​ಪ್ರೀತ್​ ಬುಮ್ರಾ(26) ಅವರ ಬ್ಯಾಟಿಂಗ್​ ಹೋರಾಟ ಭಾರತದ ದ್ವಿತೀಯ ದಿನದ ಹೈಲೆಟ್ಸ್​ ಆಗಿತ್ತು. ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್​ ಉತ್ತಮವಾಗಿ ಆಡುತ್ತಿದೆ.

ರಾಜ್‌ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿದ್ದ ಭಾರತ ಎರಡನೇ ದಿನದಾಟದ ಆರಂಭಿಸಿ 5 ರನ್​ ಗಳಿಸುವಷ್ಟರಲ್ಲಿ ನೈಟ್‌ ವಾಚ್‌ಮನ್(4) ಹಾಗೂ ಶತಕವೀರ ರವೀಂದ್ರ ಜಡೇಜಾ(112) ವಿಕೆಟ್​ ಕಳೆದುಕೊಂಡರು.

ಜಡೇಜಾ ದ್ವಿತೀಯ ದಿನದಾಟದಲ್ಲಿ 2 ರನ್​ ಗಳಿಸಿದರು. ಒಟ್ಟು 225 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 112 ರನ್ ಗಳಿಸಿ ಜೋ ರೂಟ್​ಗೆ ವಿಕೆಟ್​ ಒಪ್ಪಿಸಿದರು. ಇದೇ ವೇಳೆ ಜಡೇಜಾ ಇಂಗ್ಲೆಂಡ್ ವಿರುದ್ಧ 1000 ಟೆಸ್ಟ್ ರನ್ ಗಳಿಸಿದ 15ನೇ ಭಾರತೀಯ ಆಟಗಾರ ಎನಿಸಿಕೊಂಡರು. ಈ ಮೂಲಕ ಸೌರವ್​ ಗಂಗೂಲಿಯನ್ನು ಹಿಂದಿಕ್ಕಿದ್ದರು. ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ 2,535 ರನ್​ ಬಾರಿಸಿದ್ದಾರೆ.

ಗಮನ ಸೆಳೆದ ಜುರೆಲ್​


ಕೆ.ಎಸ್​ ಭರತ್​ ಅವರ ಬದಲು ಆಡಲಿಳಿದ ಆಗ್ರಾ ಮೂಲದ 23 ವರ್ಷದ ಜುರೇಲ್​ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಶೈಲಿಯಂತೆ ಬ್ಯಾಟ್​ ಬೀಸಿದ ಜುರೇಲ್​ ಅಶ್ವಿನ್​ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್​ವೊಂದನ್ನು ಕಟ್ಟಿದರು. ಈ ಜೋಡಿ 8 ವಿಕೆಟ್​ಗೆ ಅತ್ಯಮೂಲ್ಯ 77 ರನ್​ ಒಟ್ಟುಗೂಡಿಸಿದರು. ಇವರ ಈ ಬ್ಯಾಟಿಂಗ್​ ಸಾಹಸದಿಂದ ತಂಡ 450ರ ಸನಿಹದ ಮೊತ್ತ ದಾಖಲಿಸಿತು.

ಇದನ್ನೂ ಓದಿ IND vs ENG: 500 ವಿಕೆಟ್​ಗಳ ಸರದಾರನಾದ ಆರ್​. ಅಶ್ವಿನ್; ಈ ಸಾಧನೆ ಮಾಡಿದ 2ನೇ ಭಾರತೀಯ

ಅಶ್ವಿನ್‌ 89 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 37 ರನ್ ಬಾರಿಸಿ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್​ ಪತನದ ಬೆನ್ನಲ್ಲೇ ಧೃವ್ ಜುರೆಲ್ ವಿಕೆಟ್​ ಕೂಡ ಪತನಗೊಂಡಿತು. 104 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿದರು. ಕೇವಲ 4 ರನ್​ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಇಂಗ್ಲೆಂಡ್​ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಮಾರ್ಕ್​ ವುಡ್​ 4 ವಿಕೆಟ್​ ಕಿತ್ತರು.

5 ರನ್​ ದಂಡ

ಈ ಪಂದ್ಯದಲ್ಲಿ ಭಾರತಕ್ಕೆ ಐದು(India handed five-run penalty) ರನ್‌ಗಳ ದಂಡ ವಿಧಿಸಲಾಯಿತು. ಇದಕ್ಕೆ ಕಾರಣ ಆರ್​.ಅಶ್ವಿನ್​ ಅವರು(Ravichandran Ashwin) ಪಿಚ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ದು. ಭಾರತದ ಮೊದಲ ಇನಿಂಗ್ಸ್‌ನ 102 ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ. ಇಂಗ್ಲೆಂಡ್​ ತಂಡಕ್ಕೆ ಬ್ಯಾಟಿಂಗ್​ ಇನಿಂಗ್ಸ್​ ಆರಂಭಿಸುವ ಮುನ್ನವೇ 5 ರನ್​ಗಳು ಲಭಿಸಿತು. ಎಂಸಿಸಿಯ ಕಾನೂನು 41.14.1 ಪ್ರಕಾರ ಉದ್ದೇಶಪೂರ್ವಕ ಪ್ರಕರಣ ಇದಾಗಿದೆ. 2016ರ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಇಂದೋರ್ ಟೆಸ್ಟ್‌ನಲ್ಲಿ, ರವೀಂದ್ರ ಜಡೇಜಾ ಮಾಡಿದ ತಪ್ಪಿಗೆ ಕಿವೀಸ್​ಗೆ 5 ರನ್ ನೀಡಲಾಗಿತ್ತು.

Exit mobile version