ಲಕ್ನೋ: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ವಿಶ್ವಕಪ್(ICC World Cup 2023) ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿದೆ. ಇತ್ತಂಡಗಳ ಮುಖಾಮುಖಿ ಅಕ್ಟೋಬರ್ 29 ರಂದು ಲಕ್ನೋದ ಅಟಲ್‌ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್(Rishi Sunak) ಅವರು ಇಂಡೋ-ಆಂಗ್ಲ ಕ್ರಿಕೆಟ್ ಸಮರವನ್ನು ನೋಡಲು ಸ್ಟೇಡಿಯಂನಲ್ಲಿ ಹಾಜರ್ ಆಗಲಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಆದರೆ ಬಿಸಿಸಿಐ ಆಗಲಿ ಪ್ರಧಾನಿ ಸಚಿವಾಲಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಉಭಯ ದೇಶಗಳ ನಡುವಿನ ವ್ಯಾಪಾರ-ವ್ಯವಹಾರಗಳ ಕುರಿತ ಮಾತುಕತೆಗಳಿಗಾಗಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (UK PM Rishi Sunak) ಅಕ್ಟೋಬರ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದೆ ವೇಳೆ ಅವರು ಪಂದ್ಯ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.
ಸುನಕ್ ಮತ್ತು ಮೋದಿ ಭೇಟಿಯ ವೇಳೆ ಎರಡೂ ದೇಶಗಳ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕುವ ಸಾಧ್ಯತೆಯಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಸುನಕ್ ಕೂಡ ಭಾಗವಹಿಸಿದ್ದರು. ಈ ವೇಳೆ ಮೋದಿ ಮತ್ತು ಸುನಕ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅಲ್ಲದೆ ಮೋದಿ ದ್ವಿಪಕ್ಷೀಯ ಮಾತುಕತೆಗಳಿಗಾಗಿ ಭಾರತಕ್ಕೆ ಆಹ್ವಾನ ನೀಡಿದ್ದರು. ಇದೇ ಕಾರಣಕ್ಕೆ ಅವರು ಭಾರತಕ್ಕೆ ಬರಲಿದ್ದಾರೆ.
ದ್ರಾವಿಡ್ ನೆಚ್ಚಿನ ಆಟಗಾರ
ಇತ್ತೀಚೆಗೆ ನಡೆದಿದ್ದ ಸಂದರ್ಶನವೊಂದರಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿದ್ದರು. ಆಶ್ಯಸ್ ಟೆಸ್ಟ್ ಸರಣಿಯ ವಿಚಾರವಾಗಿ ಮಾತನಾಡುವ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದರು. ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ನಾಯಕ, ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹುಲ್ ಡ್ರಾವಿಡ್ ಅವರು ತನ್ನ ನೆಚ್ಚಿನ ಆಟಗಾರ ಎಂದಿದ್ದರು.
‘ರಾಹುಲ್ ದ್ರಾವಿಡ್ (Rahul Dravid) ನನ್ನ ನೆಚ್ಚಿನ ಕ್ರಿಕೆಟಿಗ. ನಾನು ಅವರ ಆಟವನ್ನು ಇಷ್ಟಪಡುತ್ತೇನೆ. ತಾಳ್ಮೆಯಿಂದಲೇ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ಕೊಡುವ ಅವರ ಕ್ರಿಕೆಟ್ ತಂತ್ರಗಾರಿಗೆ ನಿಜಕ್ಕೂ ಮೆಚ್ಚಲೇ ಬೇಕು. ಅವರ ವ್ಯಕ್ತಿತ್ವವೂ ಇಷ್ಟ” ಎಂದು ಹೇಳಿದ್ದರು. ಇಂಗ್ಲೆಂಡ್ ಪ್ರಧಾನಿಯಾಗಿದ್ದರೂ, ಭಾರತದ ಆಟಗಾರನನ್ನೇ ಫೇವರಿಟ್ ಎಂದು ಹೇಳುವ ಮೂಲಕ ಸುನಕ್ ಭಾರತೀಯರ ಮನ ಗೆದ್ದಿದ್ದರು.
ಇದನ್ನೂ ಓದಿ ICC World Cup 2023 : ವಿಶ್ವ ಕಪ್ನಲ್ಲಿ ಹೊಸ ದಾಖಲೆ ಬರೆದ ಪಾಕಿಸ್ತಾನ
ಸೌತಾಂಪ್ಟನ್‌ನಲ್ಲಿ 2008ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ಕುರಿತು ಅನುಭವ ಹಂಚಿಕೊಂಡ ಸುನಕ್, ಅಂದಿನ ಪಂದ್ಯವನ್ನು ನೋಡು ನಾನು ಹೋಗಿದ್ದೆ, ಆ ಪಂದ್ಯದಲ್ಲಿ ಭಾರತ ಗೆಲುವು ಕಂಡಿತ್ತು. ಸಚಿನ್ ಬ್ಯಾಟಿಂಗ್ ನೋಡಿ ಖಷಿಪಟ್ಟಿದೆ. ಭಾರತ ಗೆದ್ದ ಬಳಿಕ ನಾನು ಕೂಡ ಸಂಭ್ರಮ ಆಚರಿಸಿದ್ದೆ ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದ್ದರು.
ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡ ಪ್ರಧಾನಿ ಸುನಕ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸುನಕ್ ಅವರು ವಿಶ್ವ ವಿಜೇತ ಆಟಗಾರರೊಂದಿಗೆ ಕ್ರಿಕೆಟ್ ಆಡಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಎಡಗೈ ಆಲ್ರೌಂಡರ್ ಸ್ಯಾಮ್ ಕರನ್(Sam Curran) ಬೌಲಿಂಗ್ ಎದುರಿಸಿದ ಸುನಕ್ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದ್ದರು.