Site icon Vistara News

IND VS ENG | ಭಾರತ ತಂಡದ ಸೋಲಿಗೆ ಮುಳುವಾಯಿತೇ ಅತಿಯಾದ ಆತ್ಮವಿಶ್ವಾಸ?

t20

ಅಡಿಲೇಡ್​: ಟಿ20 ವಿಶ್ವ ಕಪ್​ ಸೆಮಿಫೈನಲ್​ ಸಮರದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ(IND VS ENG) ತಂಡ ಹೀನಾಯವಾಗಿ ಸೋತು ಕೂಟದಿಂದ ಹೊರಬಿದ್ದಿರುವುದು ಮುಗಿದು ಹೋದ ಅಧ್ಯಾಯ. ಆದರೆ ಈ ಸೋಲಿನ ಪರಾಮರ್ಶೆ ನಡೆಸಿದರೆ ಹಲವು ಕಾರಣಗಳು ಕಾಣಸಿಗುತ್ತವೆ. ಇದೀಗ ಭಾರತ ತಂಡದ ಸೋಲಿನ ಹಿಂದಿರು ಕೆಲವು ಕಾರಣಗಳು ಇಂತಿವೆ.

ಪ್ಲೇಯಿಂಗ್​ ಇಲೆವೆನ್​​ನಲ್ಲಿ ಎಡವಟ್ಟು

ಈ ಬಾರಿಯ ಟಿ20 ವಿಶ್ವ ಕಪ್ ಆರಂಭವಾದಾಗಿನಿಂದಲೂ ಟೀಮ್​ ಇಂಡಿಯಾದಲ್ಲಿ ಕೆಲವು ಕೊರತೆಗಳು ಇದ್ದವು. ಆದರೂ ಭಾರತ ಗೆಲುವು ಕಾಣುತ್ತಿದ್ದರಿಂದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್‌ಮೆಂಟ್ ತಂಡದ ದೌರ್ಬಲ್ಯಗಳ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳಲಿಲ್ಲ. ಸೆಮಿಫೈನಲ್‌ನಲ್ಲಿ ಭಾರತಕ್ಕೆ ಇದು ದೊಡ್ಡ ಹೊಡೆತ ನೀಡಿತು. ಅದರಲ್ಲೂ ಏಕ ದಿನ ವಿಶ್ವ ಚಾಂಪಿಯನ್​ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ ತಂಡದ ಪ್ಲೇಯಿಂಗ್ ಇಲೆವೆನ್​ ಆಯ್ಕೆಯಲ್ಲಿ ಸೋತಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು.

ಚಹಲ್ ಕಡೆಗಣಿಸಿದ್ದೇ ಸೋಲಿಗೆ ಕಾರಣವಾಯಿತಾ?

ಯಜುವೇಂದ್ರ ಚಹಲ್ ಭಾರತದ ಪ್ರಮುಖ ಲೆಗ್‌ ಸ್ಪಿನ್ನರ್. ಅವರ ಬೌಲಿಂಗ್​ ಫಾರ್ಮ್​ ಕೂಡ ಉತ್ತಮವಾಗಿಯೇ ಇತ್ತು. ಆದರೆ ಈ ಬಾರಿ ವಿಶ್ವ ಕಪ್‌ನಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ನೀಡಲಿಲ್ಲ. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಚಹಲ್ ಉತ್ತಮ ದಾಖಲೆ ಹೊಂದಿದ್ದಾರೆ. ಪಂತ್, ದೀಪಕ್ ಹೂಡಾರನ್ನು ಆಡಿಸಿದ ಭಾರತ ತಂಡದ ಮ್ಯಾನೇಜ್‌ಮೆಂಟ್ ಚಹಲ್ ವಿಚಾರದಲ್ಲಿ ಮಾತ್ರ ಅಸಡ್ಡೆ ತೋರಿತು. ಅಶ್ವಿನ್, ಅಕ್ಷರ್ ಪಟೇಲ್ ಪ್ರತಿ ಪಂದ್ಯದಲ್ಲಿಯೂ ದುಬಾರಿ ರನ್​ ನೀಡಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಗೆಲುವಿನ ಅಲೆಯಲ್ಲಿದ್ದ ಭಾರತ ಚಹಲ್‌ರನ್ನು ಕಡೆಗಣಿಸಿದ್ದು ಸೆಮಿ ಫೈನಲ್‌ನಲ್ಲಿ ತಂಡಕ್ಕೆ ಮುಳುವಾಯಿತು. ಹಲವು ಮಾಜಿ ಕ್ರಿಕೆಟಿಗರು ಕೂಡ ಇಂಗ್ಲೆಂಡ್ ವಿರುದ್ಧ ಚಹಲ್‌ರನ್ನು ಆಡಿಸುವಂತೆ ಕೇಳಿಕೊಂಡಿದ್ದರು. ಆದರೆ ಟೀಮ್​ ಮ್ಯಾನೇಜ್‌ಮೆಂಟ್ ಮಾತ್ರ ಈ ಬಗ್ಗೆ ತಲೆ ಕಡೆಸಿಕೊಳ್ಳಿಲ್ಲ ಇದೇ ಸೋಲಿಗೆ ಕಾರಣ ಎಂದರೂ ತಪ್ಪಾಗಲಾರದು.

ಸಿರಾಜ್​-ಹರ್ಷಲ್ ಅವರನ್ನು ಬಳಸಿಕೊಳ್ಳಬಹುದಿತ್ತು

ಆಸ್ಟ್ರೇಲಿಯಾದ ಕ್ರಿಕೆಟ್​ ಪಿಚ್​ಗಳು ಹೆಚ್ಚಾಗಿ ಬೌನ್ಸಿ ಬೌಲರ್​ಗಳಿಗೆ ನೆರವಾಗುತ್ತದೆ. ಈ ಕಾರಣದಿಂದ ಸಿರಾಜ್​ ಉತ್ತಮ ಆಯ್ಕೆಯಾಗಿತ್ತು. ಏಕೆಂದರೆ ಸಿರಾಜ್​ ವೇಗದ ಜತೆಗೆ ಬೌನ್ಸರ್​ ಎಸೆಯುವುದರಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸಿರಾಜ್​ ಉತ್ತಮ ಬೌಲಿಂಗ್​ ಪ್ರದರ್ಶಿಸಿ ತಂಡದ ಗೆಲುವಿನಲ್ಲಿಯೂ ಮಹತ್ವದ ಪಾತ್ರವಹಿಸಿದ್ದರು. ಜತೆಗೆ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವೂ ಅವರಿಗಿತ್ತು. ಆದರೆ ಅವರನ್ನು ತಂಡ ಸರಿಯಾಗಿ ಬಳಸಿಕೊಳ್ಳಲಿಲ್ಲ. ಇನ್ನೊಂದೆಡೆ ಈ ಬಾರಿ ಟಿ20 ವಿಶ್ವ ಕಪ್​ನಲ್ಲಿ ಬೌಂಡರಿ ಲೈನ್​ ಅಂತರವನ್ನು ಹೆಚ್ಚಳ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಸ್ಲೋ ಬೌಲರ್​ಗಳಿಗೆ ವಿಕೆಟ್​ ಪಡೆಯಲು ಹೆಚ್ಚಿನ ಅವಕಾಶವಿತ್ತು. ಈ ಅಸ್ತ್ರವೂ ಭಾರತ ತಂಡದಲ್ಲಿತ್ತು. ಹರ್ಷಲ್​ ಪಟೇಲ್​ ಸ್ಲೋ ಬೌಲಿಂಗ್​ ನಡೆಸುವಲ್ಲಿ ಎತ್ತಿದ ಕೈ. ಐಪಿಎಲ್​ನಲ್ಲಿ ಸ್ಲೋ ಯಾರ್ಕರ್​ ಎಸೆದು ಬ್ಯಾಟರ್​ಗಳನ್ನು ಕಾಡಿದ್ದರು. ಒಂದೊಮ್ಮೆ ಅವರಿಗೆ ಅವಕಾಶ ನೀಡುತ್ತಿದ್ದರೆ ಭಾರತದ ಪಾಲಿಗೆ ವರದಾನವಾದರೂ ಆಗುತ್ತಿತ್ತು. ಆದರೆ ಅವರಿಗೂ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ನೀಡಲಿಲ್ಲ ಇದು ಕೂಡ ಸೋಲಿಗೆ ಪ್ರಮುಖ ಕಾರಣ.

ಕಿರಿಯ ಆಟಗಾರರನ್ನು ಕಡೆಗಣಿಸಿದ್ದೇ ಹಿನ್ನಡೆಗೆ ಕಾರಣವಾಯಿತಾ

ಟಿ20 ಕ್ರಿಕೆಟ್​ನಲ್ಲಿ ಅಷ್ಟಾಗಿ ಹೆಚ್ಚು ಯಶಸ್ಸು ಗಳಿಸದ ಹಿರಿಯ ಆಟಗಾರರಾದ ಮೊಹಮ್ಮದ್​ ಶಮಿ, ಭುವನೇಶ್ವರ್​ ಕುಮಾರ್​, ಆರ್​. ಅಶ್ವಿನ್​ ಮತ್ತು ದಿನೇಶ್​ ಕಾರ್ತಿಕ್​ಗೆ ತಂಡ ಮಣೆಹಾಕಿ ಎಡವಿತೇ ಎಂಬ ಪ್ರಶ್ನೆಯೂ ಕಾಡಲಾರಂಭಿಸಿದೆ. ಟಿ20 ಕ್ರಿಕೆಟ್​ನಲ್ಲಿ ಪಂಟರ್​ ಎನಿಸಿದ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶಾನ್, ಸಂಜು ಸ್ಯಾ​ಮ್ಯನ್​ ಅವರಂತ ಆಟಗಾರರಿಗೆ ಅವಕಾಶ ನೀಡದೇ ಇರುವುದು ಕೂಡ ಸೋಲಿಗೆ ಒಂದು ಕಾರಣ ಎನ್ನಬಹುದು. ಒಟ್ಟಾರೆ ಟೀಮ್​ ಮ್ಯಾಜೇಜ್​ಮೆಂಟ್​ ಮತ್ತು ತಂಡದ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು.

ಬುಮ್ರಾ-ಜಡೇಜಾ ಅನುಪಸ್ಥಿತಿ

ವಿಶ್ವ ಕಪ್​ ಟೂರ್ನಿಗೂ ಮುನ್ನ ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ಸಿಲುಕಿ ಕೂಟದಿಂದ ಹೊರಬಿದ್ದರು. ಇವರ ಸೇವೆ ಕಳೆದುಕೊಂಡದ್ದು ಕೂಡ ಸೋಲಿಗೆ ಒಂದು ಪ್ರಮುಖ ಕಾರಣ ಎನ್ನಬಹುದು. ಈ ಉಭಯ ಆಟಗಾರರ ಬದಲಿಗೆ ತಂಡದಲ್ಲಿ ಅವಕಾಶ ಪಡೆದ ಮೊಹಮ್ಮದ್​ ಶಮಿ ಮತ್ತು ಅಕ್ಷರ್​ ಪಟೇಲ್​ ತಂಡಕ್ಕೆ ಯಾವ ಹಂತದಲ್ಲಿಯೂ ನೆರವು ನೀಡುವಲ್ಲಿ ಯಶಸ್ಸು ಕಾಣಲಿಲ್ಲ ಆದ್ದರಿಂದ ತಂಡಕ್ಕೆ ಜಡೇಜಾ ಮತ್ತು ಬುಮ್ರಾ ಅವರ ಅನುಪಸ್ಥಿತಿ ಕಾಡಿದ್ದಂತು ನಿಜ ಎನ್ನಬಹುದು.

ಇದನ್ನೂ ಓದಿ | IND VS ENG | ಕ್ರಿಕೆಟ್‌ ಅಲ್ಲ, ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ; ಭಾರತದ ಸೋಲಿಗೆ ಅಭಿಮಾನಿಗಳ ಪ್ರತಿಕ್ರಿಯೆ

Exit mobile version