ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ನ(IND vs ENG) ದ್ವಿತೀಯ ಇನಿಂಗ್ಸ್ನಲ್ಲಿ ಮೂರು ವಿಕೆಟ್ ಕಿತ್ತ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(R Ashwin) ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಭಾರತೀಯ ಬೌಲರ್ ಎನಿಸಿಕೊಂಡರು.
ಅಶ್ವಿನ್ ಅವರು ಮೂರು ವಿಕೆಟ್ ಕೀಳುವ ಮುನ್ನ ಈ ದಾಖಲೆ ಕನ್ನಡಿಗ ಲೆಗ್ ಸ್ಪಿನ್ನರ್ ಭಾಗವತ್ ಚಂದ್ರಶೇಖರ್(Bhagwath Chandrasekhar) ಹೆಸರಿನಲ್ಲಿತ್ತು. ಚಂದ್ರಶೇಖರ್ ಅವರು 95 ವಿಕೆಟ್ ಪಡೆದಿದ್ದರು. ಇದೀಗ ಅಶ್ವಿನ್ ತಮ್ಮ ವಿಕೆಟ್ಗಳ ಸಂಖ್ಯೆಯನ್ನು 97ಕ್ಕೆ ಏರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. 92 ವಿಕೆಟ್ ಕಿತ್ತ ಅನಿಲ್ ಕುಂಬ್ಳೆ ಸ್ಥಾನದಲ್ಲಿದ್ದಾರೆ. ಬಿಶನ್ ಸಿಂಗ್ ಬೇಡಿ ಹಾಗೂ ಕಪಿಲ್ ದೇವ್ ತಲಾ 85 ವಿಕೆಟ್ ಕಿತ್ತು ಆ ಬಳಿಕದ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ಮೂಲಕವೂ ಉತ್ತಮ ದಾಖಲೆ ಹೊಂದಿದ್ದಾರೆ. 2021ರಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು. ಒಟ್ಟಾರೆ ಅಶ್ವಿನ್ ಟೆಸ್ಟ್‌ನಲ್ಲಿ 5 ಶತಕ ಮತ್ತು 14 ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 124 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಅಶ್ವಿನ್ ನಾಲ್ಕು ವಿಕೆಟ್ ಪಡೆಯುತ್ತಿದ್ದರೆ 500 ವಿಕೆಟ್ಗಳ ಕ್ಲಬ್ ಸೇರುತ್ತಿದ್ದರು. ಒಂದು ವಿಕೆಟ್ ಕಡಿಮೆಯಾದ ಕಾರಣ ಈ ಸಾಧನೆ ಮಾಡಲು ಅವರಿಗೆ ಇನ್ನೊಂದು ಪಂದ್ಯದ ತನಕ ಕಾಯಬೇಕಿದೆ. ದ್ವಿತೀಯ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಲೆಸ್ ಎನಿಸಿದ್ದರಿಂದ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. 37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 97 ಟೆಸ್ಟ್ ಪಂದ್ಯಗಳನ್ನು ಆಡಿ 499* ವಿಕೆಟ್ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆಯೂ ಇವರದ್ದಾಗಿದೆ. 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ IND vs ENG: ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ಜತೆ ರೋಹಿತ್ ಸುದೀರ್ಘ ಚರ್ಚೆ; ವಿಡಿಯೊ ವೈರಲ್
Sharp Reflexes edition, ft. captain Rohit Sharma! 👌 👌
— BCCI (@BCCI) February 5, 2024
Follow the match ▶️ https://t.co/X85JZGt0EV#TeamIndia | #INDvENG | @ImRo45 | @IDFCFIRSTBank pic.twitter.com/mPa0lUXC4C
ಅಶ್ವಿನ್ ಮುಂದಿನ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತು 500 ವಿಕೆಟ್ ಪೂರ್ತಿಗೊಳಿಸಿದರೆ, ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಟೆಸ್ಟ್ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 619 ವಿಕೆಟ್ ಪಡೆದಿದ್ದಾರೆ.
ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ
ಆಟಗಾರ | ದೇಶ | ವಿಕೆಟ್ |
ಮುತ್ತಯ್ಯ ಮುರಳೀಧರನ್ | ಶ್ರೀಲಂಕಾ | 800 |
ಶೇನ್ ವಾರ್ನ್ | ಆಸ್ಟ್ರೇಲಿಯಾ | 708 |
ಜೇಮ್ಸ್ ಆಂಡರ್ಸನ್ | ಇಂಗ್ಲೆಂಡ್ | 695* |
ಅನಿಲ್ ಕುಂಬ್ಳೆ | ಭಾರತ | 619 |
ಸ್ಟುವರ್ಟ್ ಬ್ರಾಡ್ | ಇಂಗ್ಲೆಂಡ್ | 604 |
ಗ್ಲೆನ್ ಮೆಕ್ಗ್ರಾತ್ | ಆಸ್ಟ್ರೇಲಿಯಾ | 563 |
ಕರ್ಟ್ನಿ ವಾಲ್ಷ್ | ವೆಸ್ಟ್ ಇಂಡೀಸ್ | 519 |
ನಾಥನ್ ಲಿಯಾನ್ | ಆಸ್ಟ್ರೇಲಿಯಾ | 512* |
ರವಿಚಂದ್ರನ್ ಅಶ್ವಿನ್ | ಭಾರತ | 499* |
ಡೇಲ್ ಸ್ಟೈನ್ | ದಕ್ಷಿಣ ಆಫ್ರಿಕಾ | 439 |