Site icon Vistara News

IND VS ENG | ಆಂಗ್ಲರನ್ನು ಸದೆಬಡಿದು ಫೈನಲ್​ಗೆ ಎಂಟ್ರಿ ಕೊಟ್ಟೀತೇ ಟೀಮ್​ ಇಂಡಿಯಾ?

t20

ಅಡಿಲೇಡ್​: ಟಿ20 ವಿಶ್ವ ಕಪ್​ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ನನಸು ಮಾಡುವ ನಿರೀಕ್ಷೆಯಲ್ಲಿರುವ ರೋಹಿತ್​ ಶರ್ಮ ಪಡೆ ಮಹತ್ವದ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ಸವಾಲನ್ನು ಎದುರಿಸಲಿದೆ. ಅಡಿಲೇಡ್​ ಕ್ರಿಕೆಟ್​ ಮೈದಾನದಲ್ಲಿ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಫೈನಲ್​ ಪ್ರವೇಶ ಪಡೆಯಬೇಕಾದರೆ ಭಾರತ ಗೆಲ್ಲಲೇಬೇಕಿದೆ. ಬಲಾಬಲದಲ್ಲಿ ಇತ್ತಂಡಗಳು ಬಲಿಷ್ಠವಾಗಿದೆ. ಆದ್ದರಿಂದ ಈ ಪಂದ್ಯ ಹೈವೋಲ್ಟೆಜ್​ನಿಂದ ಕೂಡಿರಲಿದೆ ಎಂದು ನಿರೀಕ್ಷಿಸಬಹುದು.

ಉಭಯ ತಂಡಗಳಿಗೂ ಗಾಯದ ಚಿಂತೆ

ಭಾರತ ಮತ್ತು ಇಂಗ್ಲೆಂಡ್​ ತಂಡಕ್ಕೆ ಇರುವಂತಹ ದೊಡ್ಡ ಸಮೆಸ್ಯೆ ಎಂದರೆ ತಂಡದ ಸ್ಟಾರ್​ ಆಟಗಾರರು ಗಾಯಕ್ಕೀಡಾಗಿರುವುದು. ಭಾರತ ಪರ ನಾಯಕ ರೋಹಿತ್​ ಮತ್ತು ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಅಭ್ಯಾಸದ ವೇಳೆ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಕೊಹ್ಲಿ ಮತ್ತು ರೋಹಿತ್​ ಪಿಟ್​ ಆಗಿದ್ದರೂ ಪಂದ್ಯದ ವೇಳೆ ಮತ್ತೆ ನೋವು ಕಾಣಿಸಿಕೊಂಡರೆ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅತ್ತ ಇಂಗ್ಲೆಂಡ್​ ತಂಡದ ಪರ ಎಡಗೈ ಬ್ಯಾಟರ್​ ಡೇವಿಡ್​ ಮಲಾನ್​ ಕೂಡ ಶ್ರೀಲಂಕಾ ವಿರುದ್ಧದ ಸೂಪರ್​-12 ಹಂತದ ಪಂದ್ಯದಲ್ಲಿ ಗಾಯಗೊಂಡು ಬ್ಯಾಟಿಂಗ್​ ನಡೆಸಲಿಲ್ಲ ಇದೀಗ ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಅವರ ಸ್ಥಾನಕ್ಕೆ ಫಿಲ್​ ಸಾಲ್ಟ್​ಗೆ ಅವಕಾಶ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಒಟ್ಟಾರೆ ಉಭಯ ತಂಡಗಳಿಗೂ ಗಾಯದ್ದೇ ಚಿಂತೆಯಾಗಿದೆ ಎನ್ನಲಡ್ಡಿಯಿಲ್ಲ.

ರೋಹಿತ್​, ಪಾಂಡ್ಯ ಬ್ಯಾಟಿಂಗ್​ ಚಿಂತೆ

ನಾಯಕ ರೋಹಿತ್​ ಶರ್ಮಾ ಮತ್ತು ಹಾರ್ದಿಕ್​ ಪಾಂಡ್ಯ ಅವರ ಸತತ ಬ್ಯಾಟಿಂಗ್​ ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಇಬ್ಬರು ಒಂದೆಡರು ಪಂದ್ಯಗಳಲ್ಲಿ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದಾರೆ. ಈ ಮಹತ್ವದ ಪಂದ್ಯದಲ್ಲಾದರೂ ಇವರು ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ. ಏಕೆಂದರೆ ಈಗ ಪ್ರದರ್ಶನ ತೋರುತ್ತಿರುವ ಸೂರ್ಯಕುಮಾರ್​, ಕೊಹ್ಲಿ, ರಾಹುಲ್​ ಅವರನ್ನೇ ನಂಬಿದರೆ ಸಾಲದು. ಒಂದೊಮ್ಮೆ ಈ ಪಂದ್ಯದಲ್ಲಿ ಈ ಆಟಗಾರರು ಆಡದಿದ್ದರೆ ಆಗ ತಂಡ ಸೋಲಿಗೆ ತುತ್ತಾಗಬಹುದು ಆದ್ದರಿಂದ ರೋಹಿತ್​ ಮತ್ತು ಹಾರ್ದಿಕ್​ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವುದು ಅಗತ್ಯವಾಗಿದೆ.

ಸೂರ್ಯ-ರಾಹುಲ್​ ಮೇಲೆ ನಂಬಿಕೆ

ಆರಂಭಿಕ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಕನ್ನಡಿಗ ರಾಹುಲ್​ ಬಳಿಕ ಆಡಿದ ಸತತ ಎರಡು ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಮ್ಮ ಬ್ಯಾಟಿಂಗ್​ ಫಾರ್ಮ್ ಕಂಡುಕೊಂಡಿದ್ದಾರೆ. ಜತೆಗೆ ಸೂರ್ಯಕುಮಾರ್​ ಅವರಂತೂ ಪ್ರತಿ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿಯೂ ಉಭಯ ಆಟಗಾರರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಉಳಿದಂತೆ ಕೊಹ್ಲಿಯೂ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿರುವುದರಿಂದ ತಂಡಕ್ಕೆ ಹಿನ್ನಡೆಯಾಗದು ಎನ್ನಬಹುದು.

ಇಂಗ್ಲೆಂಡ್​ ಸಮರ್ಥ ತಂಡ

ಜಾಸ್​ ಬಟ್ಲರ್​ ಪಡೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಅಲೆಕ್ಸ್​ ಹೇಲ್ಸ್​ ನಾಯಕ ಬಟ್ಲರ್​ ಮತ್ತು ಬೆನ್​​ ಸ್ಟೋಕ್ಸ್​ ಬ್ಯಾಟಿಂಗ್​ ಬಲವಾದರೆ. ಬೌಲಿಂಗ್​ನಲ್ಲಿ ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಸಂಭಾವ್ಯ ತಂಡಗಳು

ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್/ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್.

ಇಂಗ್ಲೆಂಡ್: ಜಾಸ್​ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಫಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್​, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.

ಸ್ಥಳ: ಅಡಿಲೇಡ್​ ಓವಲ್​ ಕ್ರಿಕೆಟ್‌ ಗ್ರೌಂಡ್‌, ಅಡಿಲೇಡ್​

ಪಂದ್ಯ ಆರಂಭ : ಮಧ್ಯಾಹ್ನ 01:30ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಇದನ್ನೂ ಓದಿ | T20 World Cup | ವಿರಾಟ್​ ಕೊಹ್ಲಿಗೆ ಗಾಯ; ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೆ ಅನುಮಾನ?

Exit mobile version