ಮುಂಬಯಿ: ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐದು ಪಂದ್ಯಗಳ ಟೆಸ್ಟ್(IND vs ENG Test Series 2025) ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಲಿದೆ. ಜೂನ್ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಬಳಿಕ ಈ ಸರಣಿ ಆರಂಭವಾಗಲಿದೆ. ಇತ್ತಂಡಗಳಿಗೂ ಇದು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿನ್ಶಿಪ್ ಋತುವಿನ(2025-27) ಮೊದಲ ಸರಣಿಯಾಗಲಿದೆ.
5 ಪಂದ್ಯಗಳ ಟೆಸ್ಟ್ ಸರಣಿ ಲೀಡ್ಸ್, ಬರ್ಮಿಂಗ್ಹ್ಯಾಮ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪ್ರಕಟಿಸಿದೆ. ಬರೋಬ್ಬರಿ ಒಂದು ತಿಂಗಳ ಕಾಲ ಈ ಸರಣಿ ನಡೆಯಲಿದೆ.
2007 ರಲ್ಲಿ ಪಟೌಡಿ ಟ್ರೋಫಿಯಲ್ಲಿ ಮೈಕೆಲ್ ವಾನ್ ನೇತೃತ್ವದ ತಂಡವನ್ನು ಭಾರತ ಸೋಲಿಸಿದ ಬಳಿಕ ಇಂಗ್ಲೆಂಡ್‌ನಲ್ಲಿ ಇದುವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆ ಪ್ರವಾಸದ ಸಮಯದಲ್ಲಿ, ರಾಹುಲ್ ದ್ರಾವಿಡ್ ನೇತೃತ್ವದ ಭಾರತವು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸರಣಿ ಗೆದ್ದುಕೊಂಡಿತ್ತು. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿತ್ತು. 2 ಪಂದ್ಯಗಳು ಡ್ರಾ ಆಗಿದ್ದವು.
ಇದನ್ನೂ ಓದಿ IND vs ENG Semi Final: ಇಂಗ್ಲೆಂಡ್ ಮಣಿಸಿ 10 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತ
2021-22ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಲಾರ್ಡ್ಸ್ ಮತ್ತು ಓವಲ್‌ನಲ್ಲಿ ಆಡಿದ ಎರಡನೇ ಮತ್ತು ನಾಲ್ಕನೇ ಟೆಸ್ಟ್ ಗೆಲುವು ಸಾಧಿಸಿದ್ದರೂ, ಲೀಡ್ಸ್ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಂಡ ಕಾರಣ ಸರಣಿ 2-2 ಅಂತರದಿಂದ ಸಮಬಲಗೊಂಡಿತು. ಒಂದು ಪಂದ್ಯ ಡ್ರಾ ಗೊಂಡಿತ್ತು.
ಭಾರತವು ಇಲ್ಲಿಯವರೆಗೆ ಆಡಿರುವ 2 ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಲಂಡನ್ನಲ್ಲಿ ನಡೆದಿದ್ದ ಈ 2 ಫೈನಲ್ನಲ್ಲಿಯೂ ಭಾರತ ಕ್ರಮವಾಗಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಸದ್ಯ ಮೂರನೇ ಆವೃತ್ತಿಯಲ್ಲಿ ಭಾರತ ಫೈನಲ್ ಪ್ರವೇಶಿಸಬೇಕಿದ್ದರೆ, ಭಾರತ 10 ಟೆಸ್ಟ್ ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದ ಸಾಧನೆ ಮಾಡಲಿದೆ.
ವೇಳಾಪಟ್ಟಿ ಹೀಗಿದೆ
ಪಂದ್ಯಗಳು | ದಿನಾಂಕ | ತಾಣ |
ಮೊದಲ ಟೆಸ್ಟ್ | ಜೂನ್ 20-24 | ಹೆಡಿಂಗ್ಲಿ, ಲೀಡ್ಸ್ |
ದ್ವಿತೀಯ ಟೆಸ್ಟ್ | ಜುಲೈ 2-6 | ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ |
ಮೂರನೇ ಟೆಸ್ಟ್ | ಜುಲೈ 10-14 | ಲಾರ್ಡ್ಸ್, ಲಂಡನ್ |
ನಾಲ್ಕನೇ ಟೆಸ್ಟ್ | ಜುಲೈ 23-27 | ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ |
ಐದನೇ ಟೆಸ್ಟ್ | July 31-August 4 | ಓವಲ್, ಲಂಡನ್ |