ರಾಂಚಿ: ಇಂಗ್ಲೆಂಡ್(IND vs ENG) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(jasprit bumrah) ಆಡುವುದು ಅನುಮಾನ ಎನ್ನಲಾಗಿದೆ. ಅತಿಯಾದ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವರಿಗೆ ಬಿಸಿಸಿಐ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಿದೆ ಎಂದು ವರದಿಯಾಗಿದೆ.
ಆರಂಭಿಕ 2 ಟೆಸ್ಟ್ಗಳಲ್ಲಿ ಒಟ್ಟು 50ಕ್ಕಿಂತ ಅಧಿಕ ಓವರ್ ಬೌಲಿಂಗ್ ನಡೆಸಿದ್ದ ಬುಮ್ರಾಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐ ಬಯಸಿತ್ತು. ಆದರೆ, ರಾಹುಲ್, ಅಯ್ಯರ್, ಶಮಿ, ವಿರಾಟ್ ಈ ಪಂದ್ಯದಿಂದ ಹೊರಬಿದ್ದ ಕಾರಣ ಅನುಭವಿಗಳ ಕೊರತೆಯೊಂದು ಎದ್ದು ಕಂಡು ಬಂತು. ಹೀಗಾಗಿ ಬುಮ್ರಾ ಅವರನ್ನು ಈ ಪಂದ್ಯದಲ್ಲಿ ಆಡಿಸಲಾಗಿತ್ತು. ಇದೀಗ ಸ್ಟಾರ್ ಆಟಗಾರರು ಇಲ್ಲದಿದ್ದರೂ ಮೂರನೇ ಪಂದ್ಯದಲ್ಲಿ ಯುವ ಆಟಗಾರರು ಬೃಹತ್ ಮೊತ್ತದ ಗೆಲುವು ದಾಖಲಿಸಿದ ಪರಿಣಾಮ ಬಿಸಿಸಿಐಗೆ ಮತ್ತು ಆಯ್ಕೆ ಸಮಿತಿಗೆ ಯುವ ಆಟಗಾರರ ಮೇಲೆ ಪೂರ್ಣ ವಿಶ್ವಾಸ ಬಂದಿದೆ. ಹೀಗಾಗಿ ಬುಮ್ರಾಗೆ 4ನೇ ಪಂದ್ಯಕ್ಕೆ ವಿಶ್ರಾಂತಿ ನೀಡುವುದು ಬುಹುತೇಖ ಖಚಿತ ಎನ್ನಲಡ್ಡಿಯಿಲ್ಲ.
ಮುಕೇಶ್ ಕುಮಾರ್ಗೆ ಅವಕಾಶ!
ಮೂರನೇ ಟೆಸ್ಟ್ನಿಂದ ಮುಕೇಶ್ ಕುಮಾರ್ ಅವರನ್ನು ಕೈ ಬಿಟ್ಟು ರಣಜಿ ಆಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ನಾಲ್ಕನೇ ಪಂದ್ಯಕ್ಕೆ ತಂಡ ಸೇರಲಿದ್ದಾರೆ ಎಂದು ತಿಳಿಸಿತ್ತು. ಹೀಗಾಗಿ ಬುಮ್ರಾ ವಿಶ್ರಾಂತಿ ಪಡೆದರೆ ಅವರ ಸ್ಥಾನದಲ್ಲಿ ಮುಖೇಶ್ ಆಡಬಹುದು. ಸಿರಾಜ್ಗೆ ದ್ವಿತೀಯ ಪಂದ್ಯದಲ್ಲಿ ವಿಶ್ರಾಂತಿ ನೀಡಿದ ವೇಳೆಯೂ ಈ ಸ್ಥಾನದಲ್ಲಿ ಮುಕೇಶ್ ಆಡಿದ್ದರು. ಆದರೆ ಕೇವಲ ಒಂದು ವಿಕೆಟ್ ಮಾತ್ರ ಕೀಳುವಲ್ಲಿ ಯಶಸ್ಸು ಕಂಡಿದ್ದರು. ನಿರೀಕ್ಷಿತ ಮಟ್ಟದ ಬೌಲಿಂಗ್ ತೋರ್ಪಡಿಸುವಲ್ಲಿ ವಿಫಲರಾಗಿದ್ದರು. ಬೌಲಿಂಗ್ ಸುಧಾರಣೆ ಮಾಡುವ ನಿಟ್ಟಿನಲ್ಲಿಯೇ ಬಿಸಿಸಿಐ ಅವರನ್ನು ಮೂರನೇ ಪಂದ್ಯದಿಂದ ಕೈಬಿಟ್ಟು ರಣಜಿ ಆಡುವಂತೆ ಹೇಳಿದ್ದು.
ಇದನ್ನೂ ಓದಿ Shubman Gill : ಪಂಜಾಬ್ನ ಚುನಾವಣಾ ಆಯೋಗದಿಂದ ವಿಶೇಷ ಗೌರವ ಪಡೆದ ಶುಬ್ಮನ್ ಗಿಲ್
ರಾಹುಲ್ ಫಿಟ್
ಸಂಪೂರ್ಣ ಫಿಟ್ ಆಗದ ಕಾರಣದಿಂದಾಗಿ ರಾಹುಲ್ ಅವರನ್ನು ಮೂರನೇ ಟೆಸ್ಟ್ನಿಂದ ಕೈಬಿಡಲಾಗಿತ್ತು. ದೇವದತ್ತ ಪಡಿಕ್ಕಲ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ ರಾಹುಲ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರು 4ನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ರಾಹುಲ್ ಆಗಮನದಿಂದ ರಜತ್ ಪಾಟಿದರ್ ಆಡುವ ಬಳಗದಿಂದ ಬಿಡುಗಡೆಯಾಗಲಿದ್ದಾರೆ. ಏಕೆಂದರೆ ಪಾಟಿದಾರ್ ಆಡಿದ 2 ಟೆಸ್ಟ್ನಲ್ಲಿಯೂ ಕಳಪೆ ಬ್ಯಾಟಿಂಗ್ ನಡೆಸಿದ್ದಾರೆ. ಶೂನ್ಯ ಸುತ್ತಿದ್ದೇ ಹೆಚ್ಚು. ಹೀಗಾಗಿ ರಾಹುಲ್ ಬಂದರೆ ಅವರು ಜಾಗ ಬಿಡಬೇಕಿದೆ. ಒಂದೊಮ್ಮೆ ರಾಹುಲ್ ಆಡದಿದ್ದರೂ ಪಾಟಿದಾರ್ ಬದಲು ಪಡಿಕ್ಕಲ್ಗೆ ಅವಕಾಶ ಸಿಗಬಹುದು.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ತ ಪಡಿಕ್ಕಲ್/ ಕೆ.ಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.