Site icon Vistara News

IND vs ENG: ಭಾರತ ತಂಡ ಪ್ರಕಟ ವಿಳಂಬಕ್ಕೆ ಏನು ಕಾರಣ?

Captain, coach and chief selection: Rohit Sharma, Rahul Dravid and Ajit Agarkar have a chat after the game

ರಾಜ್​ಕೋಟ್​: ಇಂಗ್ಲೆಂಡ್(IND vs ENG)​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಿದ್ದರೂ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿಲ್ಲ. ಗುರುವಾರ ಅಥವಾ ಶುಕ್ರವಾರವೇ ತಂಡ ಪ್ರಕಟಗೊಳ್ಳಬೇಕಿತ್ತು. ಆದರೂ ಇನ್ನೂ ಪ್ರಕಟಗೊಂಡಿಲ್ಲ. ಇದಕ್ಕೆ ಕಾರಣ ಕೂಡ ನಿಗೂಢವಾಗಿದೆ.

ಈಗಾಗಲೇ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿದ್ದ ಆಟಗಾರರು ರಾಜ್​ಕೋಟ್​ಗೆ ಬಂದಿಳಿದಿದ್ದಾರೆ. ಆದರೆ ತಂಡ ಕ್ರಕಟ ಮಾತ್ರ ವಿಳಂಬವಾಗಿದೆ. ಬಿಸಿಸಿಐ ಯಾಕಿಷ್ಟು ತಡ ಮಾಡುತ್ತಿದೆ ಎನ್ನುವ ಸ್ಪಷ್ಟ ಉತ್ತರ ಕೂಡ ಇಲ್ಲ. ಸದ್ಯದ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣ ನೀಡಿ ಮೊದಲೆರಡು ಪಂದ್ಯದಿಂದ ಹಿಂದೆ ಸರಿದಿದ್ದ ವಿರಾಟ್​ ಕೊಹ್ಲಿಯ ಲಭ್ಯತೆಯ ಬಗ್ಗೆ ಅವರಿಂದ ಮಾಹಿತಿ ಪಡೆಯುವ ಕಾರಣದಿಂದಲೇ ತಂಡ ಪ್ರಕಟ ವಿಳಂಬವಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ ಭಾರತದ ಎಲ್ಲಾ ಕ್ರಿಕೆಟಿಗರ ಕಿಟ್‌ ಗಳನ್ನು ವಿಶಾಖಪಟ್ಟಣಂನಿಂದ ರಾಜ್‌ಕೋಟ್‌ಗೆ ಕಳುಹಿಸಲಾಗಿದ್ದರೂ, ಅಯ್ಯರ್ ಅವರ ಕಿಟ್ ಗಳನ್ನು ಮುಂಬೈನಲ್ಲಿರುವ ಅವರ ಮನೆಗೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ. ಅಯ್ಯರ್ ಅವರು ಟೀಮ್​ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತು ಮೆಡಿಕಲ್ ತಂಡಕ್ಕೆ ಗಾಯದ ಮಾಹಿತಿ ನೀಡಿದ್ದು ಸರಣಿಯಿಂದಲೇ ಹೊರಗುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

’30ಕ್ಕೂ ಹೆಚ್ಚು ಎಸೆತಗಳನ್ನು ಆಡಿದ ನಂತರ ಬೆನ್ನು ನೋವು ಕಾಣಿಸುತ್ತದೆ, ಮತ್ತು ಫಾರ್ವರ್ಡ್ ಡಿಫೆನ್ಸ್ ಆಡುವಾಗ ತೊಡೆಸಂದು ನೋವು ಕಾಣಿಸುತ್ತಿದೆ”ಎಂದು ಅಯ್ಯರ್​ ಅವರು ಬಿಸಿಸಿಐ ಮತ್ತು ಮೆಡಿಕಲ್ ತಂಡಕ್ಕೆ ದೂರು ನೀಡಿದ್ದಾರೆ ಎಂದು ಮೂಲವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.

ಇದನ್ನೂ ಓದಿ U19 World Cup Final: ಆಸೀಸ್​ ಸದೆಬಡಿದು 6ನೇ ವಿಶ್ವಕಪ್​ ಗೆಲ್ಲಲಿ ಭಾರತ; ನಾಳೆ ಫೈನಲ್​

ಜಡೇಜಾ-ರಾಹುಲ್​ ಫಿಟ್​ನೆಸ್​ ಹೇಗಿದೆ?


ಗಾಯದಿಂದಾಗಿ ಕಳೆದ ಪಂದ್ಯಕ್ಕೆ ಗೈರಾಗಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌(kl rahul) ಹಾಗೂ ರವೀಂದ್ರ ಜಡೇಜಾ(ravindra jadeja) ಇಬ್ಬರೂ ಚೇತರಿಸಿಕೊಳ್ಳುತ್ತಿದ್ದು, ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಈಗಾಗಲೇ ಉಭಯ ಆಟಗಾರರು ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ. ಮೂರನೇ ಪಂದ್ಯಕ್ಕೆ ಇನ್ನೂ ಕೂಡ ಒಂದು ವಾರಗಳ ಕಾಲಾವಕಾಶವಿದೆ. ಈ ವೇಳೆಗೆ ಉಭಯ ಆಟಗಾರರು ಕೂಡ ಫಿಟ್​ ಆಗಬಹುದು. ಈ ಕಾರಣದಿಂದಲೂ ತಂಡ ಪ್ರಕಟ ವಿಳಂಬವಾಗಿರುವ ಸಾಧ್ಯತೆ ಇದೆ.

ಬುಮ್ರಾಗೆ ರೆಸ್ಟ್​


ಮೊದಲ 2 ಟೆಸ್ಟ್​ ಪಂದ್ಯಗಳಲ್ಲಿ ಒಟ್ಟು 57 ಓವರ್​ ಬೌಲಿಂಗ್​ ಮಾಡಿದ್ದ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರಿಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲು ಬಯಸಿದೆ. ಈ ವಿಚಾರ ಈಗಾಗಲೇ ತಿಳಿದುಬಂದಿದೆ. ತಂಡದಲ್ಲಿ ಅವರು ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದರೆ ಅವರ ಸ್ಥಾನಕ್ಕೆ ಮತ್ತೋರ್ವ ಅನುಭವಿ ಬೌಲರ್​ ಆಯ್ಕೆ ಮಾಡುವುದು ಕೂಡ ಬಿಸಿಸಿಐಗೆ ಸವಾಲಾಗಿದೆ. ಏಕೆಂದರೆ ಸಿರಾಜ್​ ಹೊರತುಪಡಿಸಿ ಬೇರಾರು ತಂಡದಲ್ಲಿ ಅನುಭವಿಗಳಿಲ್ಲ. ಶಮಿ ಕೂಡ ಗಾಯದಿಂದ ಚೇತರಿಕೆ ಕಂಡಿಲ್ಲ. ಒಟ್ಟಾರೆ ಬಿಸಿಸಿಐಗೆ ಗಾಯದ್ದೇ ಚಿಂತೆಯಾಗಿದೆ.

Exit mobile version