ಪ್ರೊವಿಡೆನ್ಸ್: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ಹೈವೋಲ್ಟೇಜ್ ಸೆಮಿ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ಮಾಜಿ ಆಟಗಾರ ಮೈಕೆಲ್ ವಾನ್(Michael Vaughan) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಭಾರತ ತಂಡಕ್ಕೆ ಅನುಕೂಲವಾಗುವಂತೆ ಸೆಮಿಫೈನಲ್ ವೇಳಾಪಟ್ಟಿಯನ್ನು ಮೊದಲೇ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಾನ್ ಅವರು ಈ ಆರೋಪ ಮಾಡಲು ಪ್ರಮುಖ ಕಾರಣವೆಂದರೆ, ಇತ್ತಂಡಗಳ ಈ ಪಂದ್ಯಕ್ಕೆ ಭಾರೀ ಮಳೆ ಭೀತಿ ಇದ್ದರೂ ಕೂಡ ಮೀಸಲು ದಿನದ ಸೌಲಭ್ಯವೂ ಇಲ್ಲ. ಹೆಚ್ಚುವರಿ 250 ನಿಮಿಷವನ್ನು ನೀಡಲಾಗಿದ್ದರೂ, ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 10 ಓವರ್ ಆಡುವುದು ಅಗತ್ಯವಾಗಿದೆ. ಒಂದೊಮ್ಮೆ ಪಂದ್ಯ ನಡೆಯದೇ ಇದ್ದರೆ ಸೂಪರ್-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇದು ವಾನ್ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರನ್ನು ಸಹಜವಾಗಿಯೇ ಕೆರಳಿಸುವಂತೆ ಮಾಡಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ವಾನ್, ಒಂದು ಸೆಮಿ ಫೈನಲ್ಗೆ ಮೀಸಲು ದಿನ ನಿಗದಿಪಡಿಸಿ ಮತ್ತೊಂದು ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ನಿಯಮ ಎಂದರೆ ಎಲ್ಲ ತಂಡಗಳಿಗೂ ಮತ್ತು ಪಂದ್ಯಗಳಿಗೂ ಅನ್ವಯವಾಗಬೇಕು. ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಸೆಮಿಫೈನಲ್ ಮೊದಲು ನಡೆಯಬೇಕಿತ್ತು. ಆದರೆ ಭಾರತ ತಂಡಕ್ಕೆ ಅನುಕೂಲವಾಗುವಂತೆ 2ನೇ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾವನ್ನು ಆಡಿಸಲಾಗಿದೆ. ಇದು ಪಕ್ಷಪಾತ ಧೋರಣೆ, ಇದರಿಂದ ಇಂಗ್ಲೆಂಡ್ಗೆ ಅನ್ಯಾಯವಾಗಿದೆ. ಇದರಲ್ಲಿ ಬಿಸಿಸಿಐ ಕೈವಾಡವಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ IND vs ENG Semi Final: ಇಂದಿನ ಪಂದ್ಯಕ್ಕೆ ಭಾರತ ಆಡುವ ಬಳಗದಲ್ಲಿ ಒಂದು ಬದಲಾವಣೆ ಖಚಿತ!
ಐಸಿಸಿ ಪ್ರಕಾರ, ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಕೆರಿಬಿಯನ್ ದ್ವೀಪಗಳ ನಡುವಿನ ಪ್ರಯಾಣದ ಯೋಜನೆಗಳನ್ನು ಸರಿಹೊಂದಿಸಲು ಪಂದ್ಯಗಳ ನಡುವೆ 24-ಗಂಟೆಗಳ ಅಂತರವಿರುತ್ತದೆ. ಹೀಗಾಗಿ ಮೀಸಲು ದಿನ ಇರಿಸಿಲ್ಲ ಎನ್ನುವುದು ಐಸಿಸಿ ಹೇಳಿಕೆಯಾಗಿದೆ.
ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್, ಫಿಲ್ ಸಾಲ್ಟ್, ಜಾನಿ ಬೇರ್‌ಸ್ಟೊ, ಲಿವಿಂಗ್ಸ್ಟೋನ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಘಾತಕ ವೇಗಿ ಜೋಫ್ರಾ ಆರ್ಚರ್ ಕೂಡ ತಂಡಕ್ಕೆ ಮರಳಿದ್ದು ಇಂಗ್ಲೆಂಡ್ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.