Site icon Vistara News

IND vs ENG: ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಟೀಮ್​ ಇಂಡಿಯಾ ಆಟಗಾರರು

Wearing Black Arm Bands

ಲಕ್ನೋ: ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ವಿಶ್ವಕಪ್​ನ 29ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ(IND vs ENG) ಆಟಗಾರರು ಕಪ್ಪು ಪಟ್ಟಿ ಧರಿಸಿ(Black Arm Bands) ಆಡಲಿಳಿದರು. ಕಳೆದ ಸೋಮವಾರಂದು ನಿಧನರಾದ ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್‌ ದಿಗ್ಗಜ, ದೇಶಿ ಕ್ರಿಕೆಟ್‌ ಕಂಡ ಖಡಕ್‌ ನಾಯಕರಾಗಿದ್ದ ಬಿಷನ್‌ ಸಿಂಗ್‌ ಬೇಡಿ(Bishan Singh Bedi) ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದರು.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಸದ್ಯ ಮೂರು ವಿಕೆಟ್​ ಕಳೆದುಕೊಂಡ ಆರಂಭಿಕ ಆಘಾತ ಎದುರಿಸಿದೆ. ನಾಯಕ ರೋಹಿತ್​ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ಸೆಮಿ ಟಿಕೆಟ್​ ಅಧಿಕೃತಗೊಳ್ಳಲಿದೆ. ಇಂಗ್ಲೆಂಡ್​ ಸೋತರೆ ಅಧಿಕೃತವಾಗಿ ಹೊರಬೀಳಲಿದೆ.

ಅಕ್ಟೋಬರ್​ 23ರಂದು ನಿಧನ

77 ವರ್ಷದವರಾಗಿದ್ದ ಬಿಷನ್​ ಸಿಂಗ್​ ಬಿಷನ್‌ ಸಿಂಗ್‌ ಬೇಡಿ ಅವರು ಅಕ್ಟೋಬರ್​ 23ರ ಸೋಮವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಈ ಮಹಾನ್‌ ಆಟಗಾರನ ಅಗಲಿಕೆಗೆ ಕ್ರಿಕೆಟ್​ ಜಗತ್ತು ಸೇರಿ ಅನೇಕರು ಕಂಬನಿ‌ ಮಿಡಿದಿದ್ದಾರೆ. 1946ರಲ್ಲಿ ಅಮೃತಸರದ ಸಂಪ್ರದಾಯಸ್ಥ ಸಿಕ್ಖ್ ಕುಟುಂಬದಲ್ಲಿ ಜನಿಸಿದ ಬಿಷನ್‌ ಸಿಂಗ್‌ ಬೇಡಿ ಅವರು 1967-1979ರ ಅವಧಿಯಲ್ಲಿ 67 ಟೆಸ್ಟ್‌ ಪಂದ್ಯಗಳನ್ನಾಡಿದ್ದರು.

ಇದನ್ನೂ ಓದಿ IND vs ENG Live: ಭಾರತಕ್ಕೆ ಆರಂಭಿಕ ಆಘಾತ ಮೂರನೇ ವಿಕೆಟ್​ ಪತನ

ಭಾರತ ಕಂಡ ದಿಗ್ಗಜ ಸ್ಪಿನ್ನರ್​

ಬಿಷನ್‌ ಸಿಂಗ್‌ ಬೇಡಿ ಅವರು ಭಾರತ ಪರ 67 ಟೆಸ್ಟ್‌ ಪಂದ್ಯಗಳಿಂದ 266 ವಿಕೆಟ್‌, ಏಕದಿನದಲ್ಲಿ 7 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದರು. ಬೇಡಿ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಇನ್ನಿಂಗ್ಸ್‌ ಒಂದರಲ್ಲಿ 98ಕ್ಕೆ 7 ವಿಕೆಟ್‌, ಟೆಸ್ಟ್‌ ಒಂದರಲ್ಲಿ 194ಕ್ಕೆ 10 ವಿಕೆಟ್‌ ಉರುಳಿಸಿದ್ದು ಬೇಡಿ ಅವರ ಅತ್ಯುತ್ತಮ ಸಾಧನೆಯಾಗಿದೆ. 1975ರ ವಿಶ್ವಕಪ್‌ ಪಂದ್ಯದಲ್ಲಿ 12 ಓವರ್‌ಗಳಲ್ಲಿ 8 ಮೇಡನ್‌ ಮಾಡಿ, ಕೇವಲ 6 ರನ್‌ ನೀಡಿದ್ದು ಬೇಡಿ ಅವರ ಬೌಲಿಂಗ್‌ ಪರಾಕ್ರಮಕ್ಕೊಂದು ಸಾಕ್ಷಿ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಛಾಪು ಮೂಡಿಸಿದ್ದ ಇವರು 370 ಪಂದ್ಯಗಳಿಂದ 1,560 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ.

ಬೇಡಿ ಅವರು 1975-1979ರ ಅವಧಿಯಲ್ಲಿ ಭಾರತ ಟೆಸ್ಟ್‌ ತಂಡದ ನಾಯಕರೂ ಆಗಿದ್ದರು. ಮನ್ಸೂರ್‌ ಅಲಿ ಖಾನ್‌ ಪಟೌಡಿ ಅವರ ನಿವೃತ್ತಿ ಬಳಿಕ ಬೇಡಿ ಅವರು ತಂಡವನ್ನು ಮುನ್ನಡೆಸಿದ್ದರು. 1974-1982ರ ಅವಧಿಯಲ್ಲಿ ದೆಹಲಿ ರಣಜಿ ತಂಡದ ನಾಯಕರಾಗಿ ಇವರ ಸಾರಥ್ಯದಲ್ಲಿ ತಂಡ 2 ಸಲ ರಣಜಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಒಟ್ಟಾರೆ ಅವರು ಭಾರತೀಯ ಕ್ರಿಕೆಟ್​ಗೆ ಅಪಾರ ಕೊಡುಗೆ ನೀಡಿದ್ದರು.

Exit mobile version