ರಾಜ್ಕೋಟ್: ರಾಷ್ಟ್ರೀಯ ತಂಡದ ಪರ ರನ್ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ(Cheteshwar Pujara) ಅವರು ಸದ್ಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮಳೆಯನ್ನೇ ಸುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಸಕ್ತ ಥರುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪೂಜಾರ ದ್ವಿಶತಕ ಬಾರಿಸಿ ಮಿಂಚಿದ್ದರು. ಆದರೂ ಕೂಡ ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದೀಗ ಶುಕ್ರವಾರ ರಾಜಸ್ಥಾನ ವಿರುದ್ಧ ಪೂಜಾರ ಶತಕ ಬಾರಿಸಿ ಗಮನಸೆಳೆದಿದ್ದಾರೆ. ಸೌರಾಷ್ಟ್ರ ಪರ ಆಡುವ ಪೂಜಾರ 230 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 110 ರನ್ ಸಿಡಿಸಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ IND vs ENG: ಭಾರತ ತಂಡ ಪ್ರಕಟ ವಿಳಂಬಕ್ಕೆ ಏನು ಕಾರಣ?
ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐಗೆ ತಿಳಿಸಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ ಅಯ್ಯರ್ ಕೂಡ ಗಾಯಗೊಂಡು ಆಡುವುದು ಅನುಮಾನ ಎನ್ನಲಾಗಿದೆ. ತಂಡದಲ್ಲಿ ಅನುಭವಿ ಆಟಗಾರರ ಕೊರೆಯೊಂದು ಕಾಡಿದೆ. ಹೀಹಾಗಿ ಸದ್ಯ ದೇಶೀಯ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡುತ್ತಿರುವ ಚೇತೇಶ್ವರ್ ಪೂಜಾರ ಅವರನ್ನು ಉಳಿದ ಪಂದ್ಯಗಳಿಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಕೋಟ್ ಪೂಜಾರ ಅವರ ತವರು ಮೈದಾನವೂ ಆಗಿದೆ.
35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ. ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ಗೆ ಬಂದ ಚೆಂಡನ್ನು ಬ್ಯಾಟ್ ಎತ್ತಿ ಹಿಡಿದು ಕ್ಲೀನ್ ಬೌಲ್ಡ್ ಆಗಿದ್ದರು. ಪೂಜಾರ ಈ ರೀತಿ ವಿಕೆಟ್ ಒಪ್ಪಿಸಿದ್ದನ್ನು ಕಂಡು ಅನೇಕ ಮಾಜಿ ಕ್ರಿಕೆಟಿಗರು ಟೀಕೆ ವ್ಯಕ್ತಪಡಿಸಿದ್ದರು. ಪೂಜಾರ ಇದುವರೆಗೆ ಭಾರತ ಪರ 103 ಟೆಸ್ಟ್ ಪಂದ್ಯ ಆಡಿ 7195 ರನ್ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಮತ್ತು 35 ಅರ್ಧಶತಕ ಒಳಗೊಂಡಿದೆ.
ಮುಂಬೈ ಪರ ದೇಶೀಯ ಕ್ರಿಕೆಟ್ ಟೂರ್ನಿ ಆಡುವ ಸರ್ಫರಾಜ್ ಖಾನ್ ಅವರು ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ. ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 96 ಮತ್ತು 55 ರನ್ ಬಾರಿಸಿದ್ದರು. ಹಿಂದಿನ ಮೂರು ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ತೋರಿದ್ದರು. ಮೂರನೇ ಟೆಸ್ಟ್ ಪಂದ್ಯಕ್ಕೂ ಇವರು ಆಯ್ಕೆಯಾಗುವ ಸಾಧ್ಯತೆ ಇದ್ದು ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಆಡುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಿದರೆ ಇದು ಅವರ ಪದಾರ್ಪಣ ಪಂದ್ಯವಾಗಲಿದೆ.