Site icon Vistara News

IND VS NZ | ಸಂಜು ಸ್ಯಾಮ್ಸನ್​ಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ನೀಡುವಂತೆ ನ್ಯೂಜಿಲ್ಯಾಂಡ್​ನಲ್ಲೂ ಅಭಿಯಾನ

New Zealand vs India, 2nd T20

ಮೌಂಟ್​ ಮೌಂಗನಿ: ಆತಿಥೇಯ ನ್ಯೂಜಿಲ್ಯಾಂಡ್(IND VS NZ )​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ 65 ರನ್​ಗಳ ಗೆಲುವು ಸಾಧಿಸಿದೆ. ಆದರೆ ಸಂಜು ಸ್ಯಾಮ್ಸನ್​ಗೆ ಈ ಪಂದ್ಯದಲ್ಲಿ ಆಡಲು ​ಅವಕಾಶ ನೀಡದಿದ್ದಕ್ಕೆ ಅಭಿಮಾನಿಗಳು ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೌಂಟ್​ ಮೌಂಗನಿ ಬೇ ಓವಲ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 6 ವಿಕೆಟ್​ಗೆ 191 ರನ್​ ಪೇರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ತಂಡ 18.5 ಓವರ್​ಗಳಲ್ಲಿ 126 ರನ್​ಗೆ ಸರ್ವಪತನ ಕಂಡಿತು.

ಟೀಮ್​ ಇಂಡಿಯಾದ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರೂ ಆಡುವ ಹನ್ನೊಂದರ ಬಳಗದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡದೇ ಇರುವ ಬಗ್ಗೆ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ‘ಇದು ಅತಿಯಾಯಿತು’ ಎನ್ನುವ ಮೀಮ್‌ ಹಂಚಿಕೊಳ್ಳುವ ಮೂಲಕ ಅಭಿಮಾನಿ ಒಬ್ಬ ತಮ್ಮ ಅಸಮಾಧಾನ ಹೊರಹಾಕಿದ್ದಾನೆ.

ಮತ್ತೊಬ್ಬ ಅಭಿಮಾನಿ “ಸಂಜು ಇಲ್ಲ, ಉಮ್ರಾನ್‌ ಮಲಿಕ್‌ ಇಲ್ಲ. ಬದಲಾವಣೆ ತರುತ್ತೇವೆಂದು ಎಷ್ಟೇ ನಾಟಕವಾಡಿದರೂ, ಅದೇ ತಂಡವನ್ನು ಆಡಿಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

“ವರ್ಷಗಳು ಕಳೆದವು, ಕ್ಯಾಪ್ಟನ್‌ಗಳು ಬದಲಾದರು, ಕ್ರಿಕೆಟ್‌ನ ಮಾದರಿಗಳು ಬದಲಾಯಿತು. ಆದರೆ ಆಡುವ 11ರ ಬಳಗದಿಂದ ಸಂಜು ಸ್ಯಾಮ್ಸನ್‌ ಅವರನ್ನು ಹೊರಗಿಡುವ ಪ್ರವೃತ್ತಿ ಮಾತ್ರ ಹೀಗೇ ಮುಂದುವರಿದಿದೆ” ಎಂದು ವ್ಯಂಗ್ಯ ಮಾಡಲಾಗಿದೆ.

“ಆಡುವ ಹನ್ನೊಂದರ ಬಳಗದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡದೇ ಇರುವುದರಲ್ಲಿ ಅರ್ಥವೇ ಇಲ್ಲ. ಸಂಜು ಸ್ಯಾಮ್ಸನ್‌ ಟೀಮ್ ಇಂಡಿಯಾ ತೊರೆದು, ಇಂಗ್ಲೆಂಡ್‌ ತಂಡ ಸೇರಬೇಕು. ಅಲ್ಲಿ ಪ್ರತಿಭೆಗೆ ತಕ್ಕ ಬೆಲೆ ನೀಡುತ್ತಾರೆ” ಹೀಗೆ ಹಲವಾರು ಮಂದಿ ಬಿಸಿಸಿಐ ವಿರುದ್ಧ ಟೀಕೆ ಮಾಡಿದ್ದಾರೆ.

Exit mobile version