ನೇಪಿಯರ್: ಎಡಗೈ ಬ್ಯಾಟರ್ ಡೆವೋನ್ ಕಾನ್ವೆ (59) ಮತ್ತು ಗ್ಲೆನ್ ಫಿಲಿಪ್ಸ್ (54) ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 160 ರನ್ ಗಳಿಸಿದೆ. ಹಾರ್ದಿಕ್ ಪಡೆ ಗೆಲುವಿಗೆ 161 ರನ್ ಪೇರಿಸಬೇಕಿದೆ.
ನೇಪಿಯರ್ನ ಮೆಕ್‌ಲೀನ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 19.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 160 ರನ್ ಗಳಿಸಿ ಭಾರತಕ್ಕೆ ಸವಾಲೊಡ್ಡಿದೆ. ಭಾರತ ಪರ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 4 ವಿಕೆಟ್ ಕಿತ್ತು ಮಿಂಚಿದರು.
ಕಿವೀಸ್ಗೆ ಆರಂಭಿಕ ಆಘಾತ
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನ್ಯೂಜಿಲ್ಯಾಂಡ್ ತಂಡ ಡೇಂಜರಸ್ ಬ್ಯಾಟರ್ ಫಿನ್ ಅಲೆನ್(3) ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ಕೇನ್ ವಿಲಿಯಮ್ಸನ್ ಬದಲು ತಂಡದಲ್ಲಿ ಸ್ಥಾನ ಪಡೆದ ಮಾರ್ಕ್ ಚಾಪ್ಮನ್ ಕೂಡ 12 ರನ್ಗೆ ಆಟ ಮುಗಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಅಲೆನ್ ವಿಕೆಟ್ ಅರ್ಶ್ದೀಪ್ ಪಾಲಾದರೆ, ಚಾಪ್ಮನ್ ವಿಕೆಟ್ ಸಿರಾಜ್ ಪಾಲಾಯಿತು.
ತಂಡಕ್ಕೆ ಆಸರೆಯಾದ ಕಾನ್ವೆ-ಫಿಲಿಪ್ಸ್
ಮೊದಲೆರಡು ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಡೆವೋನ್ ಕಾನ್ವೆ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೇನ್ ಫಿಲಿಪ್ಸ್ ಆಸರೆಯಾದರು. ಆರಂಭದಲ್ಲಿ ರಕ್ಷಣಾತ್ಮ ಆಟಕ್ಕೆ ಮುಂದಾದ ಉಭಯ ಆಟಗಾರರು ಬಳಿಕ ಭಾರತದ ಬೌಲರ್ಗಳ ಮೇಲೆರಗಿ ರನ್ ಗಳಿಕೆಗೆ ವೇಗ ನೀಡುವ ಜತೆಗೆ ಅರ್ಧಶತಕವನ್ನು ಪೂರೈಸಿದರು. ಆದರೆ 54 ರನ್ ಗಳಿಸದ ವೇಳೆ ಸಿರಾಜ್ ಅವರ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟುವ ಯತ್ನದಲ್ಲಿ ಭುವನೇಶ್ವರ್ ಕುಮಾರ್ಗೆ ಕ್ಯಾಚಿತ್ತು ವಿಕೆಟ್ ಒಪ್ಟಿಸಿದರು. ಈ ಜೋಡಿ 3ನೇ ವಿಕೆಟ್ಗೆ 86ರನ್ ಜತೆಯಾಟ ನಡೆಸಿತು. ಫಿಲಿಪ್ಸ್ ತನ್ನ ಅರ್ಧಶತಕದ ಆಟದಲ್ಲಿ 3 ಸಿಕ್ಸರ್ ಮತ್ತು 5 ಫೋರ್ ಬಾರಿಸಿದರು. ಡೆವೋನ್ ಕಾನ್ವೆ 49 ಎಸೆತಗಳಿಂದ 59 ರನ್ ಸಿಡಿಸಿದರು.
ಸ್ಕೋರ್
ನ್ಯೂಜಿಲ್ಯಾಂಡ್: 19.4 ಓವರ್ಗಳಲ್ಲಿ 160ಕ್ಕೆ ಆಲೌಟ್ (ಡೆವೋನ್ ಕಾನ್ವೆ 59, ಗ್ಲೆನ್ ಫಿಲಿಪ್ಸ್ 54, ಮೊಹಮ್ಮದ್ ಸಿರಾಜ್ 17ಕ್ಕೆ 4)
ಇದನ್ನೂ ಓದಿ | IND VS NZ | ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ