ಕ್ರೈಸ್ಟ್ಚರ್ಚ್: ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಏಕ ದಿನ ಪಂದ್ಯ ಮಳೆಯಿಂದ ಫಲಿತಾಂಶ ಕಾಣದೆ ರದ್ದುಗೊಂಡಿದೆ. ಈ ಮೂಲಕ ಕಿವೀಸ್ ಪಡೆ ಏಕದಿನ ಸರಣಿಯನ್ನು 1-0 ಅಂತರದಿಂದ ತಮ್ಮದಾಗಿಸಿಕೊಂಡಿದೆ. ಜತೆಗೆ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ಬುಧವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 47.3 ಓವರ್ಗಳಲ್ಲಿ 219 ರನ್ ಗಳಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 18ನೇ ಓವರ್ನಲ್ಲಿ 104ಕ್ಕೆ ಒಂದು ವಿಕೆಟ್ ಕಳೆದುಕೊಂಡು ಗೆಲುವಿನತ್ತ ಮುಖಮಾಡಿತ್ತು. ಆದರೆ ಇದೇ ವೇಳೆ ಎಂಟ್ರಿಕೊಟ್ಟ ಮಳೆಯಿಂದ ಪಂದ್ಯವನ್ನು ಸ್ಥಗಿತಗೊಳಿಸಿಲಾಯಿತು. ಆದರೆ ಮಳೆ ನಿಲ್ಲುವ ಸೂಚನೆ ಇರದ ಕಾರಣ ಅಂತಿಮವಾಗಿ ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಲಾಯಿತು.
ಕಿವೀಸ್ ಉತ್ತಮ ಆರಂಭ
ಭಾರತ ನೀಡಿದ 219 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಪಡೆ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೆವೋನ್ ಕಾನ್ವೆ ಮತ್ತು ಫಿನ್ ಅಲೆನ್ ಆಕ್ರಮಣಕಾರಿ ಆಟದ ಮೂಲಕ ಮೊದಲ ವಿಕೆಟ್ಗೆ 97 ರನ್ಗಳ ಅದ್ಭುತ ಜತೆಯಾಟ ನಡೆಸಿದರು. ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿದ ಅಲೆನ್ ಅರ್ಧಶತಕ ಸಿಡಿಸಿ ಉಮ್ರಾನ್ ಮಲಿಕ್ಗೆ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಮಳೆ ಸುರಿದು ಪಂದ್ಯವನ್ನು ಅರ್ಧಕ್ಕೆ ನಿಲ್ಲಿವಂತೆ ಮಾಡಿತು. ಡೆವೋನ್ ಕಾನ್ವೆ ಅಜೇಯ 38 ರನ್ ಗಳಿಸಿದ್ದರು.
ಭಾರತಕ್ಕೆ ಅಯ್ಯರ್-ಸುಂದರ್ ಆಸರೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಆಸರೆಯಾದರು. ಉಭಯ ಆಟಗಾರರು ನಡೆಸಿದ ಹೊರಾಟದಿಂದ ಭಾರತ 200ರ ಗಡಿ ದಾಟುವಲ್ಲಿ ಯಶಸ್ಸು ಕಂಡಿತು. ಉಳಿದಂತೆ ಎಲ್ಲ ಬ್ಯಾಟರ್ಗಳು ಕಿವೀಸ್ ಬೌಲರ್ಗಳ ಮುಂದೆ ಮಂಡಿಯೂರಿ ಪೆವಿಲಿಯನ್ ಪರೇಡ್ ನಡೆಸಿದರು. ಶ್ರೇಯಸ್ ಅಯ್ಯರ್ 59 ಎಸೆತ ಎದುರಿಸಿ 49 ರನ್ ಗಳಿಸಿ ಔಟಾಗುವ ಮೂಲಕ ಒಂದು ರನ್ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು.
ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಒಂದು ಬದಿಯಲ್ಲಿ ಕ್ರಿಸ್ ಕಚ್ಚಿ ನಿಂತು ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ಸುಂದರ್ 64 ಎಸೆತಗಳಿಂದ 51 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ನ್ಯೂಜಿಲ್ಯಾಂಡ್ ಪರ ಆ್ಯಡಂ ಮಿಲ್ನೆ ಮೂರು ವಿಕೆಟ್ ಕಿತ್ತು ಮಿಂಚಿದರು.
ಪಂತ್ ಮತ್ತೆ ವಿಫಲ
ಈಗಾಗಲೇ ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ರಿಷಭ್ ಪಂತ್ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ವೈಫಲ್ಯದ ಓಟವನ್ನು ಮುಂದುವರಿಸಿದ್ದು ಟೀಮ್ ಇಂಡಿಯಾ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಸಂಜು ಸ್ಯಾಮ್ಯನ್ ಅವರಂತಹ ಸಮರ್ಥ ಆಟಗಾರ ಇರುವ ವೇಳೆ ಪ್ರತಿ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರುವ ಪಂತ್ಗೆ ಅವಕಾಶ ನೀಡಿದ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂತ್ ಈ ಪಂದ್ಯದಲ್ಲಿ ಕೇವಲ 10 ರನ್ಗಳಿಗೆ ಆಟಮುಗಿಸಿದರು. ಉಳಿದಂತೆ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್(6) ಮತ್ತು ಶುಭಮನ್ ಗಿಲ್(13) ಬೇಗನೆ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು.
ಸಂಕ್ಷಿಪ್ತ ಸ್ಕೋರ್
ಭಾರತ: 47.3 ಓವರ್ಗಳಲ್ಲಿ 219ಕ್ಕೆ ಆಲೌಟ್ (ವಾಷಿಂಗ್ಟನ್ ಸುಂದರ್ 51 ಶ್ರೇಯಸ್ ಅಯ್ಯರ್ 49, ಶಿಖರ್ ಧವನ್ 28, ಆ್ಯಡಂ ಮಿಲ್ನೆ 57ಕ್ಕೆ 3).
ನ್ಯೂಜಿಲ್ಯಾಂಡ್: 18 ಓವರ್ಗಳಲ್ಲಿ 104ಕ್ಕೆ 1(ಮಳೆಯಿಂದ ಪಂದ್ಯ ರದ್ದು) (ಫಿನ್ ಅಲೆನ್ 57, ಡೆವೋನ್ ಕಾನ್ವೆ ಅಜೇಯ 38, ಉಮ್ರಾನ್ ಮಲಿಕ್ 31ಕ್ಕೆ 1)
ಇದನ್ನೂ ಓದಿ | INDvsNZ | ಬ್ಯಾಟಿಂಗ್ ವೈಫಲ್ಯ, ಸಾಧಾರಣ ಮೊತ್ತ ಪೇರಿಸಿದ ಭಾರತ; ಕಿವೀಸ್ ಬಳಗಕ್ಕೆ 220 ರನ್ ಗೆಲುವಿನ ಗುರಿ