Site icon Vistara News

IND VS NZ | ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ಟಿ20 ಸಾಧನೆ ಹೇಗಿದೆ?

New Zealand vs India, 1st T20I

ವೆಲ್ಲಿಂಗ್ಟನ್​: 2024ರ ಟಿ20 ವಿಶ್ವ ಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ನ್ಯೂಜಿಲೆಂಡ್​(IND VS NZ) ಪ್ರವಾಸದಲ್ಲಿರುವ ಹಾರ್ದಿಕ್​ ಪಾಂಡ್ಯ ನೇತೃತ್ವದ ಯುವ ಪಡೆಯನ್ನು ನೆಚ್ಚಿಕೊಂಡ ಟೀಮ್​ ಇಂಡಿಯಾ, ಶುಕ್ರವಾರ ವೆಲ್ಲಿಂಗ್ಟನ್​ನಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಉಭಯ ತಂಡಗಳು ಈ ಮೈದಾನದಲ್ಲಿ ಮಾಡಿದ ಸಾಧನೆಯ ಫ್ಲ್ಯಾಶ್​​ಬ್ಯಾಕ್​ ಈ ಕೆಳಗಿನಂತಿದೆ.

ವೆಲ್ಲಿಂಗ್ಟನ್‌ನಲ್ಲಿ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ಈವರೆಗೆ 3 ಟಿ20 ಪಂದ್ಯಗಳನ್ನಾಡಿವೆ. ಇದರಲ್ಲಿ ಆತಿಥೇಯ ನ್ಯೂಜಿಲೆಂಡ್​ ತಂಡ ಎರಡರಲ್ಲಿ ಗೆಲುವು ಸಾಧಿಸಿದೆ. ಪ್ರವಾಸಿ ಭಾರತ ಒಂದು ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಈ ಪಂದ್ಯ ಟೈ ಆಗಿತ್ತು, ಭಾರತ ಇದನ್ನು ಸೂಪರ್‌ ಓವರ್‌ನಲ್ಲಿ ಜಯಿಸಿತ್ತು.

ಭಾರತ ಮತ್ತು ಕಿವೀಸ್​ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಟ್ಟಿದ್ದು 2009ರಲ್ಲಿ. ಈ ಪಂದ್ಯವನ್ನು ಡೇನಿಯಲ್‌ ವೆಟರಿ ಪಡೆ 5 ವಿಕೆಟ್‌ಗಳಿಂದ ಜಯಿಸಿತ್ತು. ಯುವರಾಜ್‌ ಸಿಂಗ್‌ ಅವರ ಅರ್ಧ ಶತಕದಿಂದ (50) ಧೋನಿ ಬಳಗ 6ಕ್ಕೆ 149 ರನ್‌ ಮಾಡಿದರೆ, ನ್ಯೂಜಿಲ್ಯಾಂಡ್‌ ಅಂತಿಮ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿತ್ತು. ಇನ್ನು ಸರಿಯಾಗಿ 10 ವರ್ಷಗಳ ಬಳಿಕ (2019) ಇಲ್ಲಿ ಉಭಯ ತಂಡಗಳ ನಡುವಿನ 2ನೇ ಟಿ20 ಮುಖಾಮುಖೀ ಏರ್ಪಟ್ಟಿತ್ತು. ಮೊದಲು ಬ್ಯಾಟ್​ ಮಾಡಿದ ಕೇನ್​ ವಿಲಿಯಮ್ಸನ್​ ಸಾರಥ್ಯದ ಕಿವೀಸ್‌ ತಂಡ 6ಕ್ಕೆ 219 ರನ್‌ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ದಂಗಾದ ರೋಹಿತ್ ಶರ್ಮ​ ಪಡೆ 19.2 ಓವರ್‌ಗಳಲ್ಲಿ 139ಕ್ಕೆ ಕುಸಿದು ಹೀನಾಯ ಸೋಲು ಕಂಡಿತ್ತು.

ಸೂಪರ್​ ಓವರ್​ನಲ್ಲಿ ಗೆದ್ದು ಖಾತೆ ತೆರದ ಭಾರತ

ಉಭಯ ತಂಡಗಳು ವೆಲ್ಲಿಂಗ್ಟನ್‌ನಲ್ಲಿ ಕೊನೆಯ ಸಲ ಮುಖಾಮುಖಿಯಾದದ್ದು 2 ವರ್ಷಗಳ ಹಿಂದೆ(2020). ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 165 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್‌ ತನ್ನ ಪಾಲಿನ ಓವರ್​ನಲ್ಲಿ 7ವಿಕೆಟ್​ಗೆ 165 ರನ್‌ ಮಾಡಿ ಪಂದ್ಯವನ್ನು ಟೈ ಮಾಡಿತು.
ಭಾರತ ಪರ ಜಸ್​ಪ್ರೀತ್​ ಬುಮ್ರಾ ಎಸೆದ ಸೂಪರ್‌ ಓವರ್‌ನಲ್ಲಿ ಕಿವೀಸ್​ ಒಂದು ವಿಕೆಟ್​ಗೆ 13 ರನ್‌ ಮಾಡಿ ಸವಾಲು ನೀಡಿತು. ಚೇಸಿಂಗ್‌ ವೇಳೆ ರಾಹುಲ್‌ ಮೊದಲೆರಡು ಎಸೆತಗಳಲ್ಲೇ ಸಿಕ್ಸರ್​ ಮತ್ತು ಫೋರ್​ ಬಾರಿಸಿ 10 ರನ್‌ ಗಳಿಸಿ 3ನೇ ಎಸೆತದಲ್ಲಿ ಔಟಾದರು. 4-5ನೇ ಎಸೆತಗಳಲ್ಲಿ ನಾಯಕ ವಿರಾಟ್​ ಕೊಹ್ಲಿ 2 ಹಾಗೂ 4 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ವೆಲ್ಲಿಂಗ್ಟನ್​ ಮೈದಾನದ ಬಲಾಬಲದ ಇತಿಹಾಸವನ್ನು ಗಮನಿಸುವಾಗ ಆತಿಥೇಯ ನ್ಯೂಜಿಲೆಂಡ್​ ತಂಡ ಮುಂದಿದ್ದರೂ ಯುವ ಪಡೆಯನ್ನು ನೆಚ್ಚಿಕೊಂಡ ಭಾರತ ತಂಡ ಈ ಬಾರಿ ಮೇಲುಗೈ ಸಾಧಿಸುವ ನಿರೀಕ್ಷೆಯೊಂದಿದೆ.

ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ​ ಟಿ20 ಕದನದ ಹವಾಮಾನ ವರದಿ, ಪಿಚ್​ ರಿಫೋರ್ಟ್ ಹೇಗಿದೆ?

Exit mobile version