ಆಕ್ಲೆಂಡ್: ಆರಂಭದಲ್ಲಿ ನಾಯಕ ಶಿಖರ್ ಧವನ್(72), ಶುಭಮನ್ ಗಿಲ್(50) ಬಳಿಕ ಶ್ರೇಯಸ್ ಅಯ್ಯರ್(80) ಅವರ ಪ್ರಚಂಡ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 306 ರನ್ ದಾಖಲಿಸಿದೆ. ಕಿವೀಸ್ ಗೆಲುವಿಗೆ 307 ರನ್ ಗಳಿಸಬೇಕಿದೆ.
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಸವಾಲೊಡ್ಡಿದೆ. ನ್ಯೂಜಿಲ್ಯಾಂಡ್ ತಂಡ ಗೆಲುವಿಗೆ 307 ರನ್ ಪೇರಿಸಬೇಕಿದೆ.
ಭಾರತಕ್ಕೆ ಉತ್ತಮ ಆರಂಭ
ಹಂಗಾಮಿ ನಾಯಕ ಶಿಖರ್ ಧವನ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಶತಕದ ಜತೆಯಾಟ ನಡೆಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು. ಆದರೆ 65 ಎಸೆತಗಳಲ್ಲಿ 50 ರನ್ ಗಳಿಸಿದ ವೇಳೆ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಭರ್ಜರಿ 124 ರನ್ಗಳ ಕೊಡುಗೆ ನೀಡಿತು. ಗಿಲ್ ಅವರ ವಿಕೆಟ್ ಪತನದ ಬಳಿಕ ಮುಂದಿನ ಓವರ್ನಲ್ಲಿ ಧವನ್ ಅವರ ವಿಕೆಟ್ ಕೂಡ ಉರುಳಿತು. ಇಲ್ಲಿಗೆ ನ್ಯೂಜಿಲ್ಯಾಂಡ್ ಕೈ ಮೇಲಾಯಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯ ವಿಕೆಟ್ ಪತನದ ಬಳಿಕ ಭಾರತ ನಾಟಕೀಯ ಕುಸಿತ ಕಂಡಿತು. ರಿಷಭ್ ಪಂತ್(15), ಸೂರ್ಯಕುಮಾರ್ ಯಾದವ್ (4) ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿತು.
ಅಯ್ಯರ್ ಅರ್ಧಶತಕ
ಆರಂಭಿಕ ವಿಕೆಟ್ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಆಸರೆಯಾದರು. ಅಯ್ಯರ್ ಕಿವೀಸ್ ಬೌಲರ್ಗಳ ಮೇಲೆರಗಿ ಸಿಕ್ಸರ್ ಮತ್ತು ಫೋರ್ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು. ಜತೆಗೆ ತಂಡದ ಮೊತ್ತವನ್ನೂ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್ ಕೂಡ ಅಯ್ಯರ್ಗೆ ಉತ್ತಮ ಸಾಥ್ ನೀಡಿದರು. ಸಂಜು 36 ರನ್ ಗಳಿಸಿ ಮಿಲ್ನೆಗೆ ವಿಕೆಟ್ ಒಪ್ಪಿಸಿದರು. ಅಯ್ಯರ್ 76 ಎಸೆತ ಎದುರಿಸಿ 80 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ತಲಾ 4 ಫೋರ್ ಮತ್ತು ಸಿಕ್ಸರ್ ಸಿಡಿಯಿತು. ಅಂತಿಮವಾಗಿ ವಾಷಿಂಗ್ಟನ್ ಸುಂದರ್(ಅಜೇಯ 37) ಸಿಡಿದು ನಿಂತ ಕಾರಣ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಯಿತು.
ಉಮ್ರಾನ್-ಅರ್ಶ್ದೀಪ್ ಪದಾರ್ಪಣೆ
ಭಾರತ ತಂಡದ ಪರ ಯುವ ವೇಗಿಗಳಾದ ಅರ್ಶ್ದೀಪ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮತ್ತೊಂದೆಡೆ ಟಿ20 ಸರಣಿಯಲ್ಲಿ ಅವಕಾಶ ವಂಚಿತ ಸಂಜು ಸ್ಯಾಮ್ಸನ್ ಮೊದಲನೇ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದರು.
ಸ್ಕೋರ್ ವಿವರ
ಭಾರತ: 50 ಓವರ್ಗಳಲ್ಲಿ 7 ವಿಕೆಟ್ಗೆ 306 (ಶಿಖರ್ ಧವನ್ 72, ಶುಭಮನ್ ಗಿಲ್ 50, ಶ್ರೇಯಸ್ ಅಯ್ಯರ್ 80 , ಲಾಕಿ ಫರ್ಗ್ಯುಸನ್ 59ಕ್ಕೆ 3).
ಇದನ್ನೂ ಓದಿ |Fifa World Cup | ರೊನಾಲ್ಡೊ ವಿಶ್ವ ದಾಖಲೆ; ಘಾನಾ ವಿರುದ್ಧ ಮೇಲುಗೈ ಸಾಧಿಸಿದ ಪೋರ್ಚುಗಲ್