ವೆಲ್ಲಿಂಗ್ಟನ್: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ಸೆಮಿಫೈನಲ್ನಲ್ಲಿ ಹೀನಾಯವಾಗಿ ಸೋತು ನಿರಾಶೆ ಮೂಡಿಸಿದ್ದ ಟೀಮ್ ಇಂಡಿಯಾ(IND VS NZ) ಇದೀಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಶುಕ್ರವಾರ ವೆಲ್ಲಿಂಗ್ಟನ್ನಲ್ಲಿ ಮೊದಲ ಪಂದ್ಯವನ್ನಾಡುವ ಮೂಲಕ ಈ ಸರಣಿಗೆ ಚಾಲನೆ ದೊರೆಯಲಿದೆ. ಈ ಪಂದ್ಯದ ಹವಾಮಾನ ವರದಿ, ಪಿಚ್ ರಿಫೋರ್ಟ್ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಪಿಚ್ ರಿಫೋರ್ಟ್
ನ್ಯೂಜಿಲೆಂಡ್ ಪಿಚ್ಗಳೆಲ್ಲ ಬ್ಯಾಟಿಂಗ್ ಸ್ನೇಹಿಯಾಗಿದೆ. ಬೌಂಡರಿ ಗೆರೆ ಸಮೀಪ ಇರುವುದರಿಂದ ಇಲ್ಲಿ ದೊಡ್ಡ ಮೊತ್ತ ಪೇರಿಸಲು ಸುಲಭ. ಅದರಂತೆ ವೆಲ್ಲಿಂಗ್ಟನ್ ಪಿಚ್ ಕೂಡ ಬ್ಯಾಟಿಂಗ್ ಸ್ನೇಹಿಯಾಗಿದ್ದು ಐಪಿಎಲ್ನಲ್ಲಿ ಮಿಂಚಿದ ಸಂಜು ಸ್ಯಾಮ್ಸನ್, ಸೂರ್ಯಕುಮಾರ್, ಇಶಾನ್ ಕಿಶನ್ ಇಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ. ಆದರೆ ಬೌಲರ್ಗಳು ಮಾತ್ರ ಇಲ್ಲಿ ಯಶಸ್ಸು ಗಳಿಸಬೇಕಾದರೆ ಶಕ್ತಿಯ ಜತೆಗೆ ಯುಕ್ತಿಯ ಪಯೋಗವನ್ನು ಮಾಡಬೇಕಿದೆ. ಯುಕ್ತಿ ಎಂದರೆ ಬೌಲರ್ಗಳು ಸ್ಲೋ ಬೌಲಿಂಗ್ ಪ್ರಯೋಗವನ್ನು ನಡೆಸಬೇಕು ಎಂದರ್ಥ.
ಪಂದ್ಯಕ್ಕೆ ಮಳೆ ಭೀತಿ
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಕೆಲ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದ್ದವು ಜತೆಗೆ ಫೈನಲ್ ಸಹಿತ ಹಲವು ಪಂದ್ಯಗಳು ಮಳೆ ಕಾರ್ಮೋಡ ಎದುರಿಸಿದ್ದವು. ಇದೀಗ ಆಸ್ಟ್ರೇಲಿಯಾದ ನೆರೆಯ ದೇಶ ನ್ಯೂಜಿಲೆಂಡ್ನಲ್ಲಿಯೂ ಮಳೆ ಭೀತಿ ಎದುರಾಗಿದೆ. ಅದರಂತೆ ವೆಲ್ಲಿಂಗ್ಟನ್ನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮಳೆ ಮುನ್ಸೂಚನೆ ಇದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಆದರೆ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗುತ್ತದೆ. ಈ ಹೊತ್ತಿಗೆ ಶೇ. 54 ರಷ್ಟು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಗುರುವಾರ ಇಲ್ಲಿ ಮಳೆ ಕಾಟ ಇರಲಿಲ್ಲ.
ಇದನ್ನೂ ಓದಿ | IND VS NZ | ನ್ಯೂಜಿಲೆಂಡ್ ಪ್ರವಾಸ ಹಾರ್ದಿಕ್ ಪಾಂಡ್ಯ ಯುಗಕ್ಕೆ ಮುನ್ನುಡಿಯೇ?