ವೆಲ್ಲಿಂಗ್ಟನ್: ಕಳೆದ ದುಬೈ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಟಿ20 ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ(IND VS NZ ) ಹೀನಾಯವಾಗಿ ಸೋತು ಹೊರಬಿದ್ದ ಬಳಿಕ ಭಾರತದ ಅಭಿಮಾನಿಗಳ ಜತೆಗೆ ಮಾಜಿ ಕ್ರಿಕೆಟಿಗರ ಒಂದೇ ಕೂಗು ಚುಟುಕು ಮಾದರಿಯ ಕ್ರಿಕೆಟ್‌ನಿಂದ ಸೀನಿಯರ್‌ಗಳನ್ನೆಲ್ಲ ಕೈಬಿಟ್ಟು ಯುವ ಪಡೆಯೊಂದನ್ನು ರೂಪಿಸಿ ಇವರನ್ನು 2024ರ ವಿಶ್ವ ಕಪ್‌ಗೆ ಸಜ್ಜುಗೊಳಿಸಬೇಕೆನ್ನುವುದು. ಇದಕ್ಕೆ ಈಗ ಕಾಲ ಸನ್ನಿಹಿತವಾದಂತಿದ್ದೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ, ಈ ಸರಣಿ ಗೆದ್ದರೆ ಪಾಂಡ್ಯ ಯುಗ ಇಲ್ಲಿಂದಲೇ ಆರಂಭವಾಗುವ ಸಾಧ್ಯತೆ ಇದೆ.
ಹಿರಿಯರ ಅನುಪಸ್ಥಿತಿ
ಭಾರತ ತಂಡದ ಖಾಯಂ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಮೊಹಮ್ಮದ್ ಶಮಿ ಮೊದಲಾದ ಸೀನಿಯರ್‌ಗಳಿಗೆಲ್ಲ ಈ ಸರಣಿಗೆ ವಿಶ್ರಾಂತಿ ನೀಡಿದ್ದು. ಐಪಿಎಲ್ನಲ್ಲಿ ಚೊಚ್ಚಲ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಮತ್ತು ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ನಲ್ಲಿ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಂದೊಮ್ಮೆ ಸೀನಿಯರ್‌ಗಳನ್ನೆಲ್ಲ ಶಾಶ್ವತವಾಗಿ ಹೊರಗಿರಿಸಿ ಪಾಂಡ್ಯ ಮತ್ತು ಯುವ ತಂಡವನ್ನೇ ಮುಂದುವರಿಸುವುದು ಬಿಸಿಸಿಐಯ ಮುಂದಿನ ಯೋಜನೆ ಆಗಿದ್ದರೂ ಅಚ್ಚರಿಯೇನಿಲ್ಲ. ಏಕೆಂದರೆ ಇಲ್ಲಿಂದಲೇ 2024ರ ಟಿ20 ವಿಶ್ವ ಕಪ್‌ಗೆ ಸಿದ್ಧತೆ ಆರಂಭಗೊಂಡಂತಾಗುತ್ತದೆ.
ಟಿ20 ಭವಿಷ್ಯಕ್ಕೊಂದು ದಿಕ್ಸೂಚಿ
ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿ 3 ಟಿ20 ಮತ್ತು ಏಕದಿನ ಪಂದ್ಯಗಳನ್ನಾಡಲಿದೆ. ಶುಕ್ರವಾರವೇ ಮೊದಲ ಮುಖಾಮುಖಿ. ಇಲ್ಲಿ ಪಾಂಡ್ಯ ಪಡೆ ಮೇಲುಗೈ ಸಾಧಿಸಿದರೆ ರೋಹಿತ್ ಶರ್ಮ ಖಾಯಂ ಆಗಿ ಹೊರಗುಳಿಯುವುದರಲ್ಲಿ ಅನುಮಾನವಿಲ್ಲ. ಜತೆಗೆ ಮೂವತ್ತು ವರ್ಷ ದಾಟಿದ ಭುವನೇಶ್ವರ್, ಶಮಿ, ಆರ್. ಅಶ್ವಿನ್, ಕೊಹ್ಲಿ, ದಿನೇಶ್ ಕಾರ್ತಿಕ್ ಅವರಿಗೂ ಟಿ20 ಬಾಗಿಲು ಬಂದ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು. ಆಗ ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್ ಮೊದಲಾದವರು ಭಾರತದ ಟಿ20 ಕ್ರಿಕೆಟಿಗೆ ನೂತನ ದಿಶೆಯೊಂದನ್ನು ಕಲ್ಪಿಸುವ ಬಲವಾದ ನಿರೀಕ್ಷೆ ಇದೆ. ಒಟ್ಟಾರೆ ಕಿವೀಸ್ ಸರಣಿಯ ಫಲಿತಾಂಶ ಭಾರತೀಯ ಟಿ20 ಭವಿಷ್ಯಕ್ಕೊಂದು ದಿಕ್ಸೂಚಿ ಆಗಬಹುದು ಎಂಬುದೊಂದು ನಿರೀಕ್ಷೆ.
ಇದನ್ನೂ ಓದಿ | IND VS NZ | ಕಿವೀಸ್ ವಿರುದ್ಧದ ಸರಣಿಯಲ್ಲಿ ಸ್ವತಂತ್ರವಾಗಿ ಆಡುವಂತೆ ಹಾರ್ದಿಕ್ ಪಡೆಗೆ ಲಕ್ಷ್ಮಣ್ ಕಿವಿಮಾತು