ಮುಂಬಯಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಸರಣಿಯ ಮುಕ್ತಾಯದ ಬಳಿಕ ಟೀಮ್ ಇಂಡಿಯಾ, ನ್ಯೂಜಿಲ್ಯಾಂಡ್(IND VS NZ ) ವಿರುದ್ಧ ಸರಣಿ ಆಡಲಿದೆ. ಉಭಯ ತಂಡಗಳು 3 ಏಕ ದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಆದರೆ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳೆ ಕೊಹ್ಲಿ ಹಾಗೂ ರೋಹಿತ್ ಸೇರಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಕಿವೀಸ್ ವಿರುದ್ಧದ ಸರಣಿಯಲ್ಲೂ ಈ ಆಟಗಾರರನ್ನು ಕೈಬಿಡಲಾಗುವುದು ಎಂದು ವರದಿಯಾಗಿದೆ.
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಹಿರಿಯ ಆಟಗಾರರನ್ನು ಏಕ ದಿನ ಹಾಗೂ ಟೆಸ್ಟ್ ಸರಣಿಗಳಿಗೆ ಮಾತ್ರ ಆಯ್ಕೆ ಮಾಡಲಿದ್ದಾರೆ. ಅದರಲ್ಲೂ ಮುಂಬರುವ ಏಕ ದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟಿ20 ಸರಣಿಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.
ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವ ಕಪ್ ಗಮನದಲ್ಲಿರಿಸಿಕೊಂಡು ಬಿಸಿಸಿಐ ಈಗಾಗಲೇ ಯುವ ಪಡೆಗೆ ಹೆಚ್ಚಿನ ಅವಕಾಶ ನೀಡಲಾರಂಭಿಸಿದೆ. ಆದ್ದರಿಂದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿದ ತಂಡವನ್ನೇ ಕಿವೀಸ್ ವಿರುದ್ಧವೂ ಮುಂದುವರಿಸುವ ಸಾಧ್ಯತೆ ಇದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಜನವರಿ 18 ರಿಂದ ಆರಂಭವಾಗಿ ಫೆಬ್ರವರಿ 1ರ ತನಕ ನಡೆಯಲಿದೆ.
ಇದನ್ನೂ ಓದಿ | Indian Cricket Team | ಟಿ20 ತಂಡದಲ್ಲಿ ವಿರಾಟ್, ರೋಹಿತ್ ಯುಗಾಂತ್ಯ; ಕೋಚ್ ದ್ರಾವಿಡ್ ಕೊಟ್ಟ ಸುಳಿವೇನು?